ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನಲೆ ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಗೆಲುವು ಸಾಧಿಸಲು ಶಥಾಯ ಗತಾಯ ಪ್ರಯತ್ನ ಮಾಡುತ್ತಿದ್ದು, ಅದರಂತೆ ಇಂದು(ಮೇ.3)ಬೆಳಗ್ಗೆ 11 ಗಂಟೆಗೆ ಜಿಲ್ಲೆಯ ಮೂಡಬಿದಿರೆ ಕ್ಷೇತ್ರದ ಮುಲ್ಕಿಯಲ್ಲಿ ಮೋದಿ ಮತಬೇಟೆ ನಡೆಸಲಿದ್ದಾರೆ.
ಈ ಹಿನ್ನಲೆ ಮಂಗಳೂರು-ಉಡುಪಿ ಹೆದ್ದಾರಿಯಲ್ಲಿ ವಾಹನ ಸಂಚಾರ ಬದಲಾವಣೆ ಮಾಡಲಾಗಿದೆ.
ಮಂಗಳೂರು-ಉಡುಪಿ ಹೆದ್ದಾರಿಯಲ್ಲಿ ವಾಹನ ಸಂಚಾರ ಬದಲಾವಣೆ
ಹೌದು ಪ್ರಧಾನಿ ಮೋದಿ ಪ್ರಚಾರ ಹಿನ್ನಲೆ ಮಂಗಳೂರು-ಉಡುಪಿ ಹೆದ್ದಾರಿಯಲ್ಲಿ ವಾಹನ ಸಂಚಾರ ಬದಲಾವಣೆ ಮಾಡಲಾಗಿದ್ದು, ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೋಗುವ ವಾಹನಗಳು, ಮುಲ್ಕಿ ವಿಜಯ ಸನ್ನಿಧಿಯ ಬಳಿ ಎಡಕ್ಕೆ ಚಲಸಿ ಕಿನ್ನಿಗೋಳಿ, ಕಟೀಲು, ಬಜಪೆ, ಕಾವೂರು ಮೂಲಕ ಮಂಗಳೂರು ಕಡೆ ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ. ಇನ್ನು ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುವ ಎಲ್ಲಾ ರೀತಿಯ ವಾಹನಗಳು ಕೆ.ಪಿ.ಟಿ ಜಂಕ್ಷನ್ನಲ್ಲಿ ಬಲಕ್ಕೆ ಚಲಿಸಿ ಕಾವೂರು, ಬಜಪೆ, ಕಟೀಲು, ಕಿನ್ನಿಗೋಳಿ, ಮುಲ್ಕಿ ಕಡೆಗೆ ಅಥವಾ ಕೂಳೂರು ಜಂಕ್ಷನ್‌ನಿಂದ ಬಲಕ್ಕೆ ಚಲಸಿ ಕಾವೂರು, ಬಜಪೆ, ಕಟೀಲು, ಕಿನ್ನಿಗೋಳಿ ಮಾರ್ಗವಾಗಿ ಮುಲ್ಕಿ ಕಡೆಗೆ ಸಂಚರಿಸಬಹುದು. ಜೊತೆಗೆ ಮಂಗಳೂರು, ಸುರತ್ಕಲ್ ಕಡೆಯಿಂದ ಉಡುಪಿ ಕಡೆಗೆ ಹೋಗುವ ವಾಹನಗಳು, ಹಳೆಯಂಗಡಿ ಜಂಕ್ಷನ್ ಬಳಿ ಬಲಕ್ಕೆ ತಿರುಗಿ ಪಕ್ಷಿಕೆರೆ, ಎಸ್-ಕೋಡಿ ಮಾರ್ಗವಾಗಿ ಮುಲ್ಕಿ ಕಡೆಗೆ ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ.
ಮಂಗಳೂರಿನ ಮುಲ್ಕಿಯಿಂದ ಇಂದಿನ ಮೋದಿ ಪ್ರಚಾರ ಆರಂಭವಾಗಲಿದ್ದು, ಉಡುಪಿ ಮತ್ತು ದಕ್ಷಿಣ ಕನ್ನಡದ 13 ಕ್ಷೇತ್ರಗಳ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ. ಬೆಳಗ್ಗೆ 10.30ಕ್ಕೆ ಮಂಗಳೂರಿನ ಮುಲ್ಕಿಯಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮೋದಿ ಕೇಸರಿ ಕಲರವ ಎಬ್ಬಿಸಲಿದ್ದಾರೆ. ಎರಡು ಜಿಲ್ಲೆಗಳಿಂದ ಎರಡೂವರೆ ಲಕ್ಷ ಜನರು ಆಗಮಿಸುವ ನಿರೀಕ್ಷೆಯಿದ್ದು, ಬಿಜೆಪಿ ಪ್ರಧಾನಿ ಸಮಾವೇಶಕ್ಕೆ ಪ್ರತಿ ಬೂತ್ ಮಟ್ಟದಲ್ಲಿ ಸಭೆ ನಡೆಸಿದೆ.