ಬೈಂದೂರು: ‘ಗುರುರಾಜ ಗಂಟಿ ಹೊಳೆ 25 ರಿಂದ 30 ಸಾವಿರ ಮತಗಳ ಅಂತರದಲ್ಲಿ ಜಯ ಸಾಧಿಸಲಿದ್ದಾರೆ’ -ಬಿಎಸ್‌‌ವೈ

ಬೈಂದೂರು, ಮೇ 06: ಬೈಂದೂರು ವಿಧಾನಸಭಾ ಕ್ಷೇತ್ರ ಸೇರಿದಂತೆ ರಾಜ್ಯದಲ್ಲಿ 130ರಿಂದ 135 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಲಿದೆ. ಹಾಗೆಯೇ ಬೈಂದೂರು ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿ ಹೊಳೆಯವರು 25 ರಿಂದ 30 ಸಾವಿರ ಮತಗಳ ಅಂತರದಲ್ಲಿ ಜಯ ಸಾಧಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದರು.

ಭಾರತೀಯ ಜನತಾ ಪಕ್ಷ ಬೈಂದೂರು ಮಂಡಲದ ವತಿಯಿಂದ ವಂಡ್ಸೆಯಲ್ಲಿ ಶನಿವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಬೈಂದೂರು ಕ್ಷೇತ್ರಕ್ಕೆ ಯೋಗ್ಯ, ಪ್ರಾಮಾಣಿಕ ಅಭ್ಯರ್ಥಿಯನ್ನು ಪಕ್ಷ ನೀಡಿದೆ. ಅವರನ್ನು ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಗುರುರಾಜ ಗಂಟಿ ಹೊಳೆಯವರು ಚಪ್ಪಲಿಯನ್ನು ಹಾಕದೆ ಪಕ್ಷಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದರು.

ಚುನಾವಣೆ ಸಂದರ್ಭದಲ್ಲಿ ಕೆಲವರು ನಮ್ಮ ಅಭ್ಯರ್ಥಿ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಇದ್ಯಾವುದಕ್ಕೂ ಕವಡೆ ಕಾಸಿನ ಕಿಮ್ಮತ್ತಿಲ್ಲ. ಯಾರು ಕೂಡ ಇಂಥ ಅಪಪ್ರಚಾರಕ್ಕೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಎಂದು ಹೇಳಿದ ಅವರು, ಎಲ್ಲವೂ ತನಗೆ ಬೇಕು, ಬೇರೆಯವರಿಗೆ ಸಿಕ್ಕಾಗ ವಿರೋಧ ಮಾಡುವವರನ್ನು ಖಂಡಿಸಬೇಕು ಎಂದಿದ್ದಾರೆ.

ಪ್ರಧಾನ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಮೊದಲಾದವರು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದಾರೆ. ಬಿಜೆಪಿ 130 ಸೀಟುಗಳನ್ನು ಗೆಲ್ಲಲಿದ್ದೇವೆ ಎಂಬ ಭರವಸೆಯನ್ನು ಅವರಿಗೆ ಈಗಾಗಲೇ ನೀಡಿದ್ದೇವೆ. ಹೀಗಾಗಿ ನಾವೆಲ್ಲರೂ ಸೇರಿ ಗುರುರಾಜ ಗಂಟಿಹೊಳೆಯವರನ್ನು ಗೆಲ್ಲಿಸಬೇಕು ಎಂದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಬೈಂದೂರು ಕ್ಷೇತ್ರದಲ್ಲಿ ಕಾಲೇಜುಗಳು, ಗೋಶಾಲೆಗಳ ಸ್ಥಾಪನೆ ಮಾಡಲಿದ್ದೇವೆ. ಈಗಾಗಲೇ ಉತ್ತಮವಾದ ಪ್ರನಾಳಿಕೆಯನ್ನು ನೀಡಿದ್ದೇವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ವಾರದ ಒಳಗೆ ಪ್ರನಾಳಿಕೆ ಈಡೇರಿಸಲಿದ್ದೇವೆ ಎಂದು ಹೇಳಿದ್ದಾರೆ.

ಅಭ್ಯರ್ಥಿ ಗುರುರಾಜ ಗಂಟಿಹೊಳೆ ಮಾತನಾಡಿ, ರಾಜಕೀಯದಲ್ಲಿ ಪೆಟ್ಟು, ಪಟ್ಟು ನಾಯಕರು ನೀಡಬಹುದು. ಪ್ರಾಮಾಣಿಕ ಕಾರ್ಯಕರ್ತರು ಇರುವ ತನಕ ಯಾವ ಪೆಟ್ಟು-ಪಟ್ಟು ತಾಗುವುದಿಲ್ಲ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಆಶೀರ್ವಾದ ಸಿಕ್ಕಿದೆ. ಯಡಿಯೂರಪ್ಪನವರು, ನರೇಂದ್ರ ಮೋದಿಯವರು ಈ ನಾಡಿಗೆ ಕೊಟ್ಟಷ್ಟು ಕೊಡುಗೆ ಯಾರು ನೀಡಿಲ್ಲ. ನನ್ನ ಜೀವನ ಪರ್ಯಂತ ಪಕ್ಷ ಹಾಗೂ ಕ್ಷೇತ್ರಕ್ಕಾಗಿ ದುಡಿಯುತ್ತೇನೆ ಎಂದರು.

ಮಾಜಿ ಶಾಸಕರಾದ ಬಿ.ಅಪ್ಪಣ್ಣ ಹೆಗ್ಡೆ, ಲಕ್ಷ್ಮೀನಾರಾಯಣ, ಹಿಂದುಳಿದ ವರ್ಗಗಳ ಮೋರ್ಚಾದ ಕಾರ್ಯದರ್ಶಿ ಗೋವಿಂದ ಬಾಬು ಪೂಜಾರಿಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಪಕ್ಷದ ಪ್ರಮುಖರಾದ ಪ್ರಣಯ ಕುಮಾರ್ ಶೆಟ್ಟಿ, ಶ್ಯಾಮಲ ಕುಂದರ್, ಶೋಭಾ ಪುತ್ರನ್, ಹರ್ಕೂರು ಮಂಜಯ್ಯ ಶೆಟ್ಟಿ, ಸುರೇಶ ಬಟ್ವಾಡಿ, ರೋಹಿತ್ ಕುಮಾರ್ ಶೆಟ್ಟಿ, ಮಹೇಂದ್ರ ಪೂಜಾರಿ, ನಾಗರಾಜ ಶೆಟ್ಟಿ, ಮಾಲತಿನ ನಾಯಕ್, ಭಾಗೀರಥಿ, ಚುನಾವಣಾ ಉಸ್ತುವಾರಿ ಕ್ಯಾ|ಬ್ರಿಜೇಶ್ ಚೌಟ,ಹೊರ ರಾಜ್ಯದ ಉಸ್ತುವಾರಿ ಉನ್ನಿಕೃಷ್ಣ, ಮಂಡಲದ ಪ್ರಧಾನ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.

ಮಂಡಲದ ಅಧ್ಯಕ್ಷ ದೀಪಕ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಜಿಲ್ಲಾ ಉಪಾಧ್ಯಕ್ಷ ಆನಂದ ಖಾರ್ವಿ ಕಾರ್ಯಕ್ರಮ ನಿರ್ವಹಿಸಿದರು.

Baravanige News

Adblock Detected!

Our website is made possible by displaying online advertisements to our visitors. Please consider supporting us by whitelisting our website.

You cannot copy content from Baravanige News

Scroll to Top