ಕಾಪು : ಕಾಪು ಕ್ಷೇತ್ರ ನನ್ನ ಹುಟ್ಟೂರು. ನನ್ನ ಊರು ಮತ್ತು ನನ್ನ ಜನತೆಯ ಕಲ್ಯಾಣಕ್ಕಾಗಿ ನಿರಂತರವಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ. ಸಮಾಜ ಸೇವೆಯ ಮೂಲಕವಾಗಿ ಬೆಳೆದು ಬಂದಿರುವ ನನಗೆ ಬಿಜೆಪಿ ರಾಜಕೀಯ ಶಕ್ತಿ ಕೊಟ್ಟು ಶಾಸಕನಾಗಿ ಸ್ಪರ್ಧಿಸಲು ಅವಕಾಶ ಕೊಟ್ಟು, ಜನರ ಸಮಸ್ಯೆಗಳಿಗೆ ಸ್ಪಂಧಿಸುವ ದಾರಿಯನ್ನು ತೋರಿಸಿಕೊಟ್ಟಿದೆ. ನನ್ನ ಊರಿನ ಜನತೆ ನನ್ನ ಗೆಲುವಿಗಾಗಿ ಕೈ ಜೋಡಿಸಿದರೆ, ನನ್ನನ್ನು ಗೆಲ್ಲಿಸಿದ ಕ್ಷೇತ್ರದ ಜನರನ್ನು ಎಲ್ಲಿಯೂ ಸೋಲಲು ಬಿಡಲಾರೆ, ತಲೆ ತಗ್ಗಿಸಲು ಬಿಡುವುದಿಲ್ಲ. ಸತ್ಯ, ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಜನಸೇವೆ ಮಾಡುತ್ತೇನೆ ಎಂದು ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ಕಾಪು ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮ ಪಂಚಾಯತ್‌ಗಳಲ್ಲಿ ಮತಯಾಚನೆ ನಡೆಸಿ, ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಬಿಲ್ಲವ ಸಮಾಜದ ಏಳಿಗೆಯೂ ಸೇರಿದಂತೆ ಸಮಸ್ತ ಹಿಂದುಳಿದ ವರ್ಗಗಳ ಜನರ ಕಲ್ಯಾಣಕ್ಕಾಗಿ ಬಿಜೆಪಿ ಸರಕಾರವು ಹಲವಾರು ಕೊಡುಗೆಗಳನ್ನು ನೀಡಿದೆ. ಬಿಲ್ಲವ ಸಮಾಜದ ಕಲ್ಯಾಣಕ್ಕಾಗಿ ನಾರಾಣಗುರು ಅಭಿವೃದ್ಧಿ ನಿಗಮ ಘೋಷಣೆ, ಮೀನುಗಾರಿಕೆ ಮತ್ತು ಮೀನುಗಾರರ ಕಲ್ಯಾಣಕ್ಕಾಗಿ ಹಲವಾರು ಅಯೋಜನೆಗಳನ್ನು ಜಾರಿಗೆ ತಂದಿದೆ.
ಸಮಾಜದ ಎಲ್ಲಾ ವರ್ಗಗಳ ಜನತೆಯ ಅಭಿವೃದ್ಧಿಗಾಗಿ ಇನ್ನಷ್ಟು ಯೋಜನೆಗಳನ್ನು ಬಿಜೆಪಿ ಸರಕಾರ ಜಾರಿಗೆ ತರುವ ಆಶ್ವಾಸನೆ ನೀಡಲಾಗಿದೆ. ರಾಜಕೀಯ ಮತ್ತು ಸ್ವಾರ್ಥ ರಹಿತಾವಗಿ ಕಾಪು ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಗುರ್ಮೆ ಸುರೇಶ್ ಶೆಟ್ಟಿಯವರ ಅಗತ್ಯವಿದೆ. ಪ್ರತೀಯೊಬ್ಬ ಮತದಾರರೂ ಸಂಪೂರ್ಣ ಬೆಂಬಲವನ್ನು ನೀಡುವುದರ ಜತೆಗೆ ಗುರ್ಮೆ ಅವರನ್ನು ಬಹುಮತದಿಂದ ಆರಿಸಿ, ಶಾಸಕನನ್ನಾಗಿ ಆಯ್ಕೆಗೊಳಿಸುವಂತೆ ಮನವಿ ಮಾಡಿದರು.
ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ಸಮಾಜ ಸೇವೆಗೆ ಪರ್ಯಾಯ ಪದವೇ ಗುರ್ಮೆ ಸುರೇಶ್ ಶೆಟ್ಟಿ. ಸಾಮಾಜಿಕ, ಧಾರ್ಮಿಕ ಮತ್ತು ಶೆ„ಕ್ಷಣಿಕವಾಗಿ ಗುರುತಿಸಿಕೊಂಡಿರುವ ಗುರ್ಮೆ ಅವರ ಜೊತೆಗಿದ್ದು ನಾವು ಬಿಜೆಪಿಯನ್ನು ಗೆಲ್ಲಿಸಬೇಕಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಅವರು ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ನನ್ನನ್ನು ಗೆಲ್ಲಿಸಿದ್ದರು, ಈ ಬಾರಿ ನಾನು ಅವರನ್ನು ಗೆಲ್ಲಿಸುವ ಜವಾಬ್ದಾರಿಯನ್ನು ನಿಭಾಯಿಸುತ್ತೆನೆ. ನಮ್ಮ ಪ್ರಯತ್ನಗಳಿಗೆ ಕ್ಷೇತ್ರದ ಜನತೆಯ ಬೆಂಬಲವೂ ಅತ್ಯಗತ್ಯವಾಗಿದೆ ಎಂದರು.
ಉಡುಪಿ ಶಾಸಕ ರಘುಪತಿ ಭಟ್ ಮಾತನಾಡಿ, ಕಾಂಗ್ರೆಸ್ ಪಕ್ಷ ಬಿಡುಗಡೆಗೊಳಿಸಿರುವ ಪ್ರಣಾಳಿಕೆಯು ಸಂಪೂರ್ಣ ಜನವಿರೋಧಿ ಪ್ರಣಾಳಿಕೆಯಾಗಿದೆ. ಭಜರಂಗದಳ ನಿಷೇಧ, ಗೋಹತ್ಯೆ ನಿಷೇಧ ಕಾಯ್ದೆ ಹಿಂಪಡೆಯುವಿಕೆ, ಟಿಪ್ಪು ಜಯಂತಿ ಮರು ಆಚರಣೆಯೂ ಸೇರಿದಂತೆ ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವಿ, ಬಹುಸಂಖ್ಯಾತರ ಮನಸ್ಸಿಗೆ ಘಾಸಿ ಮಾಡುವಂತಹ ಜನವಿರೋಧಿ ಕಾರ್ಯಕ್ರಗಳನ್ನು ಜಾರಿಗೆ ತರುವ ಹಗಲು ಕನಸನ್ನು ಕಾಂಗ್ರೆಸ್ ಪಕ್ಷ ಕಾಣುತ್ತಿದೆ. ಧರ್ಮ ರಕ್ಷಣೆಗೋಸ್ಕರ ಬಿಜೆಪಿ ಸರಕಾರವೇ ರಾಜ್ಯದಲ್ಲಿ ಮತ್ತೆ ಆಡಳಿತಕ್ಕೆ ಬರಲಿದ್ದು, ಗುರ್ಮೆ ಅವರು ಹಿಂದಿಗಿಂತಲೂ ಹೆಚ್ಚಿನ ಮತಗಳೊಂದಿಗೆ ಜಯಗಳಿಸುವ ವಿಶ್ವಾಸವಿದೆ ಎಂದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನ ಗಣೇಶ್, ಬಿಜೆಪಿ ಪ್ರಚಾರಕ್ ಕುತ್ಯಾರು ಪ್ರಸಾದ್ ಶೆಟ್ಟಿ, ಉದ್ಯಾವರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರವಿ ಕೋಟ್ಯಾನ್, ಉದ್ಯಾವರ ಗ್ರಾ. ಪಂ. ಅಧ್ಯಕ್ಷ ರಾಧಾಕೃಷ್ಣ ಶ್ರೀಯಾನ್, ಉಡುಪಿ ಜಿ.ಪಂ. ಮಾಜಿ ಅಧ್ಯಕ್ಷ ಉಪೇಂದ್ರ ನಾಯಕ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀಶ ನಾಯಕ್, ಜಿಲ್ಲಾ ಸಹವಕ್ತಾರ ಪ್ರತಾಪ್‌ಶೆಟ್ಟಿ, ಬಡಗಬೆಟ್ಟು ಮಹಾಶಕ್ತಿಕೇಂದ್ರದ ಅಧ್ಯಕ್ಷ ಸಂದೀಪ್ ಶೆಟ್ಟಿ, ಹಿರೇಬೆಟ್ಟು ಗ್ರಾ.ಪಂ. ಆಧ್ಯಕ್ಷ ಪುರಂಧರ್ ಕೋಟ್ಯಾನ್, ಕಳತ್ತೂರು ಶಕ್ತಿಕೇಂದ್ರದ ಅಧ್ಯಕ್ಷ ಸುರೇಶ್ ದೇವಾಡಿಗ, ಅಭ್ಯರ್ಥಿ ಪ್ರಮುಖ್ ಅನಿಲ್ ಕುಮಾರ್, ಬೆಳಪು ಬೂತ್ ಸಮಿತಿ ಅಧ್ಯಕ್ಷ ಶಂಕರ ಗುರಿಕಾರ, ಪ್ರಮುಖರಾದ ಶ್ರೀಧರ್, ಯೋಗೀಶ್ ಕೋಟ್ಯಾನ್, ವೀಣಾ ಶ್ರೀಧರ್, ಸುರೇಂದ್ರ ಪಣಿಯೂರು, ವಿಜಯ್ ಕುಮಾರ್ ಉದ್ಯಾವರ, ಗಣೇಶ್ ಕುಮಾರ್ ಉದ್ಯಾವರ, ಸಂತೋಷ್ ಬೊಳೆj, ಪ್ರಸಾದ್ ಹೆಗ್ಡೆ, ಶಂಕರ್ ಸಾಲ್ಯಾನ್, ಪ್ರವೀಣ್ ಪೂಜಾರಿ, ಹರೀಶ್ ಸಾಲ್ಯಾನ್, ವಿನಂತಿ, ಸುಂದರ್ ನಾಯಕ್, ಗಣೇಶ್ ಶೆಟ್ಟಿ, ಪ್ರಭಾಕರ ಶೆಟ್ಟಿ, ಶಶಿರಾಜ್ ಪೈಯ್ನಾರು, ನಿತ್ಯಾನಂದ ಶೆಟ್ಟಿ ಕಳತ್ತೂರು, ದಯಾನಂದ ಶೆಟ್ಟಿ, ಸುಭಾಸ್ ಶೆಟ್ಟಿ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ನಿರುದ್ಯೋಗ ನಿವಾರಣೆಗೆ ವಿಶೇಷ ಒತ್ತು : ಗುರ್ಮೆ
ಕಾಪು ವಿಧಾನಸಭಾ ಕ್ಷೇತ್ರವು ಕೋಸ್ಟಲ್ ಟೂರಿಸಂ, ಟೆಂಪಲ್ ಟೂರಿಸಂ, ಕೈಗಾರಿಕೆ ಮತ್ತು ಶೈಕ್ಷಣಿಕ ಹಬ್‌ಗ ಪ್ರಸಿದ್ಧಿ ಪಡೆಯುತ್ತಿದೆ. ಇಷ್ಟೆಲ್ಲಾ ವ್ಯವಸ್ಥೆಗಳಿದ್ದರೂ ನಮ್ಮ ಯುವಕರು ಉದ್ಯೋಗ ಅರಸಿ ಹೊರ ಜಿಲ್ಲೆ, ರಾಜ್ಯ, ರಾಷ್ಟ್ರಗಳಿಗೆ ತೆರಳುವಂತಾಗಿದೆ. ಕಾಪು ಕ್ಷೇತ್ರದಲ್ಲಿ ಬಲವಾಗಿರುವ ಕೋಸ್ಟಲ್ ಟೂರಿಸಂ, ಟೆಂಪಲ್ ಟೂರಿಸಂ, ಕೈಗಾರಿಕೆ ಮತ್ತು ಶೈಕ್ಷಣಿಕ ಹಬ್‌ಗಳಲ್ಲಿ ನಮ್ಮ ಊರಿನ ಯುವಕ-ಯುವತಿಯರಿಗೆ ಆದ್ಯತೆಯಡಿ ಕೆಲಸ ದೊರಕಿಸಿಕೊಡುವ ಮೂಲಕ ನಿರುದ್ಯೋಗ ನಿವಾರಣೆಗೆ ವಿಶೇಷ ಪ್ರಯತ್ನ ನಡೆಸುವುದಾಗಿ ಗುರ್ಮೆ ಸುರೇಶ್ ಶೆಟ್ಟಿ ಭರವಸೆ ನೀಡಿದ್ದಾರೆ.