ಚುನಾವಣೆ ಕಾವು, ಐಪಿಎಲ್ ಹವಾ ನಡುವೆಯೂ ಅಬ್ಬರಿಸಿದ ‘ದಿ ಕೇರಳ ಸ್ಟೋರಿ’; 3 ದಿನಕ್ಕೆ ಆದ ಕಲೆಕ್ಷನ್ ಎಷ್ಟು..!!??

ಗಲ್ಲಾಪೆಟ್ಟಿಗೆಯಲ್ಲಿ ‘ದಿ ಕೇರಳ ಸ್ಟೋರಿ’ ಸಿನಿಮಾ ಸದ್ದು ಮಾಡುತ್ತಿದೆ. ಮೇ 5ರಂದು ಬಿಡುಗಡೆ ಆದ ಈ ಸಿನಿಮಾ ವೀಕೆಂಡ್ನಲ್ಲಿ ಸಖತ್ ಸದ್ದು ಮಾಡಿದೆ.

ಮೊದಲು ಮೂರು ದಿನಗಳ ಕಾಲ ಜನರು ಮುಗಿಬಿದ್ದು, ಈ ಚಿತ್ರ ನೋಡಿದ್ದಾರೆ. ದಿನದಿಂದ ದಿನಕ್ಕೆ ‘ದಿ ಕೇರಳ ಸ್ಟೋರಿ’ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಹೆಚ್ಚಾಗುತ್ತಿದೆ.

ಮೊದಲ ದಿನ ಈ ಚಿತ್ರ 8.3 ಕೋಟಿ ರೂಪಾಯಿ ಗಳಿಸಿತ್ತು. ಎರಡನೇ ದಿನವಾದ ಶನಿವಾರ ಗಣನೀಯ ಏರಿಕೆ ಕಂಡಿತು. ಅಂದು ‘ದಿ ಕೇರಳ ಸ್ಟೋರಿ’ ಗಳಿಸಿದ್ದು ಬರೋಬ್ಬರಿ 11.22 ಕೋಟಿ ರೂಪಾಯಿ. ಇನ್ನು ಭಾನುವಾರ ಕೂಡ ಜನರನ್ನು ಚಿತ್ರಮಂದಿರದತ್ತ ಸೆಳೆಯುವಲ್ಲಿ ಈ ಚಿತ್ರ ಯಶಸ್ವಿ ಆಗಿದೆ. ಅಂದರೆ, 3ನೇ ದಿನ 16 ಕೋಟಿ ರೂಪಾಯಿ ಗಳಿಸಿದೆ. ಅಲ್ಲಿಗೆ, ಈ ಸಿನಿಮಾದ ಒಟ್ಟು ಕಲೆಕ್ಷನ್ 35.25 ಕೋಟಿ ರೂಪಾಯಿ ಆಗಿದೆ. ಇನ್ನೂ ಒಂದು ವಾರಗಳ ಕಾಲ ಇದೇ ರೀತಿ ಪ್ರದರ್ಶನ ಕಂಡರೆ ‘ದಿ ಕೇರಳ ಸ್ಟೋರಿ’ ಚಿತ್ರ ಆದಷ್ಟು ಬೇಗ 100 ಕೋಟಿ ರೂಪಾಯಿ ಕ್ಲಬ್ ಸೇರಲಿದೆ.

ಹಲವು ಅಡೆತಡೆಗಳನ್ನು ದಾಟಿಕೊಂಡು ‘ದಿ ಕೇರಳ ಸ್ಟೋರಿ’ ಸಿನಿಮಾ ಮುನ್ನುಗ್ಗುತ್ತಿದೆ. ಕರ್ನಾಟಕದಲ್ಲಿ ಚುನಾವಣೆಯ ಕಾವು ಜೋರಾಗಿದೆ. ಬಹುತೇಕ ಜನರು ಪ್ರಚಾರದಲ್ಲಿ, ಸಮಾವೇಷಗಳಲ್ಲಿ ಭಾಗಿ ಆಗಿದ್ದಾರೆ. ಎಲ್ಲೆಲ್ಲೂ ರಾಜಕೀಯದ್ದೇ ಚರ್ಚೆ ಆಗುತ್ತಿದೆ. ಇನ್ನು, ಐಪಿಎಲ್ ಹವಾ ಕೂಡ ಜೋರಾಗಿದೆ. ಪ್ರತಿದಿನ ಮ್ಯಾಚ್ ನೋಡುವುದರಲ್ಲೇ ಜನರು ಬ್ಯುಸಿ ಆಗಿದ್ದಾರೆ. ಇದೆಲ್ಲದರ ನಡುವೆಯೂ ‘ದಿ ಕೇರಳ ಸ್ಟೋರಿ’ ಚಿತ್ರ ಮೂರು ದಿನಕ್ಕೆ 35.25 ಕೋಟಿ ರೂಪಾಯಿ ಗಳಿಸಿರುವುದು ಹೆಚ್ಚುಗಾರಿಕೆ.

ಯಾವುದೇ ಸಿನಿಮಾಗೆ ಸೋಮವಾರದ ಕಲೆಕ್ಷನ್ ತುಂಬ ಮುಖ್ಯವಾಗಲಿದೆ. ‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ ಮೇ 8ರಂದು ಎಷ್ಟು ಕಮಾಯಿ ಆಗಿದೆ ಎಂಬ ಲೆಕ್ಕ ಇನ್ನಷ್ಟೇ ಸಿಗಬೇಕಿದೆ. ಸೋಮವಾರ ಕೂಡ ಉತ್ತಮ ಗಳಿಕೆ ಆದರೆ ಚಿತ್ರದ ನಾಗಾಲೋಟ ಹೆಚ್ಚಾಗಲಿದೆ. ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಾಯಿ ಮಾತಿನ ಪ್ರಚಾರ ಚೆನ್ನಾಗಿ ಸಿಗುತ್ತಿರುವುದರಿಂದ ಕಲೆಕ್ಷನ್ ಹೆಚ್ಚಿದೆ.


ನಟಿ ಅದಾ ಶರ್ಮಾ ಅವರು ‘ದಿ ಕೇರಳ ಸ್ಟೋರಿ’ ಸಿನಿಮಾದಲ್ಲಿ ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ಸುದೀಪ್ತೋ ಸೇನ್ ಅವರು ನಿರ್ದೇಶನ ಮಾಡಿದ್ದಾರೆ. ಕೇರಳದಲ್ಲಿ ನಡೆದಿದೆ ಎನ್ನಲಾದ ಲವ್ ಜಿಹಾದ್ ಮತ್ತು ಮತಾಂತರದ ಘಟನೆಗಳನ್ನು ಆಧರಿಸಿ ಈ ಸಿನಿಮಾ ಸಿದ್ಧವಾಗಿದೆ.

Scroll to Top