ಕುತ್ಯಾರು : ಮೂಲ್ಡೊಟ್ಟು ನಾಗಬನದಲ್ಲಿ ವರ್ಷಕ್ಕೊಮ್ಮೆ ತಂಪೆರೆಯುವ ವಾರ್ಷಿಕ ಪೂಜೆ

ಶಿರ್ವ: ಕಾಪು ತಾಲೂಕಿನ ಕುತ್ಯಾರು ಸಮೀಪದ ಮೂಲ್ಡೊಟ್ಟು ಪರಿಶಿಷ್ಟ ವರ್ಗದ ನಾಗಬನದಲ್ಲಿ ವರ್ಷಕ್ಕೊಮ್ಮೆ ತುಳು ಬೇಷ ತಿಂಗಳ ಮೊದಲ ಗುರುವಾರ ನಡೆಯುವ ನಾಗರಾಧನೆ ಪೂಜೆಯು ಮೇ. 18ರಂದು ಸಂಪನ್ನಗೊಂಡಿತು.

ವೈದಿಕ ಪರಂಪರೆಗೆ ಅವಕಾಶವಿರದೆ ವಿವಿಧ ಜಿಲ್ಲೆಗಳ ಪರಿಶಿಷ್ಟ ವರ್ಗದ ಮೊಗೇರ ಸಮುದಾಯ ದವರಿಂದ ವರ್ಷಕ್ಕೊಮ್ಮೆ ಮಾತ್ರ ಈ ನಾಗಬನದಲ್ಲಿ ಪೂಜೆ ನಡೆಯುವುದು ಅನಾದಿ ಕಾಲದ ಸಂಪ್ರದಾಯವಾಗಿದೆ. ನೈಸರ್ಗಿಕವಾಗಿ ತನ್ನ ಮೂಲ ಸ್ವರೂಪವನ್ನು ಉಳಿಸಿಕೊಂಡ ಈ ವಿಶಿಷ್ಟ ನಾಗಬನದಲ್ಲಿ ನಾಗರಪಂಚಮಿಯಂತಹ ಪರ್ವದಿನದಲ್ಲಾಗಲೀ,ಭಕ್ತರು ಬಯಸಿದ ಇತರ ದಿನದಲ್ಲಾಗಲೀ ಪೂಜೆಗೆ ಅವಕಾಶವಿಲ್ಲ.

ಪ್ರತೀ ವರ್ಷ ಇಲ್ಲಿನ ಮಣ್ಣಿನ ಮಡಕೆಯಲ್ಲಿ ನಾಗನ ಬಿಂಬದಲ್ಲಿ ನಡೆಯುವ ನಾಗಾರಾಧನೆ ಪೂಜೆಗೆ ಕಾಸರಗೋಡಿನಿಂದ ಕಾರವಾರದವರೆಗಿನ ವಿವಿಧ ಜಿಲ್ಲೆಗಳಿಂದ ಮೊಗೇರ ಸಮುದಾಯದ ಸುಮಾರು 500ಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡು, ಸಂಪ್ರದಾಯದಂತೆ ಮೂಲ್ಡೊಟ್ಟು ಗುತ್ತು ಮೂಲ ಮನೆಗೆ ತೆರಳಿ ಬಾವಿಯ ನೀರು ಕುಡಿದು ಪೂಜೆ ಸಲ್ಲಿಸಿದರು. ಈ ಬಾರಿ ಭಕ್ತರಿಗೆ ಊಟೋಪಚಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

ಪರಿಶಿಷ್ಟ ವರ್ಗದ ಮೊಗೇರ ಸಮುದಾಯದ 16 ಬಳಿ ಸಾವಿರ ಮಾಗಣೆಯ ಪ್ರಧಾನ ನಾಗಬನವಾಗಿದ್ದು ಈ ವಾರ್ಷಿಕ ಆರಾಧನೆ ಪುರಾತನ ಕಾಲದಿಂದಲೂ ಸಂಪ್ರದಾಯಬದ್ಧವಾಗಿ ನಡೆದುಕೊಂಡು ಬರುತ್ತಿದೆ. ಶಿರ್ವ ಸೊರ್ಪು ಶ್ರೀಬ್ರಹ್ಮ ಮುಗ್ಗೇರ್ಕಳ ದೈವಸ್ಥಾನದ ಗುರಿಕಾರರಿಗೆ ಮಾತ್ರ ಸನ್ನಿಧಿಯಲ್ಲಿ ತಂಪೆರೆಯುವ ಪೂಜೆ ಸಲ್ಲಿಸುವ ಅಧಿಕಾರವಿದ್ದು , ಈ ನಾಗಬನದಲ್ಲಿ ಮಾತ್ರ ತುಳು ಬೇಷ ತಿಂಗಳ ಮೊದಲ ಗುರುವಾರ ನಾಗಾರಾಧನೆ ನಡೆಯುವುದು ಕರಾವಳಿಯಲ್ಲಿ ವಿಶೇಷವಾಗಿದೆ.

You cannot copy content from Baravanige News

Scroll to Top