ಕೊಲ್ಲೂರು: ಸೌಪರ್ಣಿಕಾ ನದಿ ನೀರು ಬರಿದಾಗು ತ್ತಿದ್ದು, ಮುಂದಿನ ಎರಡು ದಿನದೊಳಗೆ ಕೊಲ್ಲೂರಿನ ಪರಿಸರದಲ್ಲಿ ಮಳೆ ಆರಂಭಗೊಳ್ಳದಿದ್ದಲ್ಲಿ ಈ ಭಾಗದ ನಿವಾಸಿಗಳು ಕುಡಿಯುವ ನೀರಿಗಾಗಿ ವಲಸೆ ಹೋಗ ಬೇಕಾದ ಸಂದಿಗ್ಧ ಪರಿಸ್ಥಿತಿ ಎದುರಾಗುವ ಭೀತಿ ಇದೆ.
ಕೊಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಲಾದ ವೆಂಟೆಡ್ ಡ್ಯಾಮ್‌ಗೆ ನೀರಿನ ಅಭಾವ ಕಾಡುತ್ತಿದ್ದು, ಕೊಡಚಾದ್ರಿ ಬೆಟ್ಟದಿಂದ ಹರಿದುಬರುವ ನೀರು ಕೂಡ ಮಳೆಯಿಲ್ಲದೇ ಬರಿದಾಗಿದ್ದು, ವೆಂಟೆಡ್ ಡ್ಯಾಮ್‌ನಲ್ಲಿ ನೀರಿನ ಕೊರತೆ ಎದುರಾಗಿದೆ.
ಒಳಚರಂಡಿ ಹಾಗೂ ಕುಡಿಯುವ ನೀರಿನ ಮಂಡಳಿಯ ನಿರ್ವಹಣೆಯ ಕೊರತೆ ವೆಂಟೆಡ್ ಡ್ಯಾಮ್ ನಲ್ಲಿ ನೀರು ಇಂಗಲು ಕಾರಣವಾಯಿತೇ ಎಂಬ ಪ್ರಶ್ನೆ ಕಾಡುತ್ತಿದೆ. ಮಾರ್ಚ್ ತಿಂಗಳಲ್ಲೇ ಡ್ಯಾಮ್‌ನ ಗೇಟ್ ವಾಲ್ ಬಳಸಿದಲ್ಲಿ ಒಂದಿಷ್ಟು ನೀರು ಸಂಗ್ರಹವಾಗುತ್ತಿದ್ದು, ಬಳಕೆಗೆ ಉಪಯೋಗವಾದೀತೆಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ.
ಕೊಲ್ಲೂರು ದೇಗುಲದ ವಸತಿಗೃಹ ಸಹಿತ ದೇಗುಲದ ನಿತ್ಯ ಕಾರ್ಯಗಳು. ಊಟದ ಹಾಲ್, ಶೌಚಾಲಯಗಳಿಗೆ ಪ್ರತಿದಿನ ಕನಿಷ್ಠ 56 ಸಾವಿರ ಲೀಟರ್‌ನಷ್ಟು ನೀರಿನ ಅಗತ್ಯವಿದೆ. ಈವರೆಗೆ ಅಚ್ಚುಕಟ್ಟಾಗಿ ನೀರನ್ನು ಬಳಸಲಾಗುತ್ತಿದ್ದು, ಮುಂದಿನ ಒಂದು ವಾರದಲ್ಲಿ ಮಳೆ ಬಾರದಿದ್ದಲ್ಲಿ ನೀರಿನ ಅಭಾವ ಎದುರಾಗುವ ಭೀತಿ ಇದೆ.
ಖಾಸಗಿ ವಸತಿ ಗೃಹಗಳಲ್ಲಿ ನೀರಿನ ಅಭಾವ ಎದುರಾಗಿದ್ದು, ಬಹುತೇಕರು ಟ್ಯಾಂಕರ್ ಮೂಲಕ ನೀರನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ.
ಕಳೆದ 15 ದಿನಗಳಿಂದ ಬರಿದಾದ ಬಾವಿಯಿಂದಾಗಿ ಕುಡಿಯುವ ನೀರಿನ ಯೋಜನೆಗೆ ಮೊರೆಹೋಗಿರುವ ಇಲ್ಲಿನ ನಿವಾಸಿಗಳಿಗೆ ನಿತ್ಯ ನೀರಿನ ಸರಬರಾಜಿನ ಕೊರತೆಯಿಂದಾಗಿ ನೀರಿಗಾಗಿ ಬವಣಿಸುವಂತಾಗಿದೆ. ನಿಗಮವು 2-3 ದಿನಕ್ಕೊಮ್ಮೆ ನೀರನ್ನು ಒದಗಿಸುತ್ತಿದ್ದರೂ, ಗ್ರಾಮಸ್ಥರು ನೀರಿಗಾಗಿ ವಲಸೆ ಹೋಗುವ ಭೀತಿ ಕಂಡುಬಂದಿದೆ.