ಒಂದು ತಿಂಗಳು ಮಗು ಸಹಿತ ಇಬ್ಬರು ಮಕ್ಕಳನ್ನು ಬಿಟ್ಟು ನಾಪತ್ತೆಯಾದ ಅಲೆಮಾರಿ ದಂಪತಿ

ದಕ್ಷಿಣ ಕನ್ನಡ : ರಾಮಕೃಷ್ಣಾಶ್ರಮಕ್ಕೆ ಒಪ್ಪಿಸಲಾಗಿದ್ದು, ಪಾಲಕರ ಪತ್ತೆಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


ಬೆಳ್ತಂಗಡಿ ತಾಲೂಕು ಕರಾಯ ಪರಿಸರದಲ್ಲಿ ಅಲೆಮಾರಿ ಜನಾಂಗದ ದಂಪತಿ ಬುಟ್ಟಿ ಹೆಣೆಯುವ ಕಾಯಕದೊಂದಿಗೆ ಆಗಾಗ ಕಾಣಿಸಿಕೊಂಡು ಪರಿಸರದ ನಿವಾಸಿಗರ ವಿಶ್ವಾಸಗಳಿಸಿದ್ದರು. ಮದ್ಯ ವ್ಯಸನಿಗಳಾದ ಇವರು ಅಲ್ಲಲ್ಲಿ ಮಲಗಿಕೊಂಡು ಅವ್ಯವಸ್ಥಿತ ಜೀವನ ನಡೆಸುತ್ತಿದ್ದರು. ದಂಪತಿಗೆ ದಿನೇಶ ಎಂಬ ನಾಲ್ಕು ವರ್ಷದ ಮಗನಿದ್ದು, ಒಂದು ತಿಂಗಳ ಹಿಂದೆಯಷ್ಟೇ ಹೆಣ್ಣು ಮಗು ಜನಿಸಿತ್ತು.

ಈ ಎರಡು ಮಕ್ಕಳನ್ನು ಜೂನ್ 2ರಂದು ಕರಾಯ ಗ್ರಾಮದ ಮನೆಯೊಂದರಲ್ಲಿ ಬಿಟ್ಟು ನಾವು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಹೋಗಿ ಬರುತ್ತೇವೆ ಎಂದು ಈ ದಂಪತಿ ತಿಳಿಸಿದ್ದರು. ಮಾನವೀಯತೆ ಮೆರೆದ‌ ಮನೆಯೊಡತಿ ಫಾತಿಮಾ ಅವರು ಇದಕ್ಕೆ ಒಪ್ಪಿಕೊಂಡಿದ್ದರು. ಆದರೆ ಆ ಬಳಿಕ ಈ ದಂಪತಿಯ ಪತ್ತೆಯಿರಲಿಲ್ಲ. ಒಂದು ತಿಂಗಳ ಹಸುಗೂಸು ಸಹಿತ ಇಬ್ಬರು ಮಕ್ಕಳ ಲಾಲನೆ ಪಾಲನೆ ಮಾಡಿದ ಫಾತಿಮಾ ಅವರು 2 ದಿನ ಕಳೆದರೂ ಹೆತ್ತವರು ಕಾಣಿಸಿಕೊಳ್ಳದೇ ಹೋದಾಗ ಕಳವಳಗೊಂಡು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿಗಳ ಗಮನಕ್ಕೆ ತಂದು ಮಕ್ಕಳನ್ನು ರವಿವಾರ ಪುತ್ತೂರಿನ ರಾಮಕೃಷ್ಣಾಶ್ರಮಕ್ಕೆ ಒಪ್ಪಿಸಿದರು.

You cannot copy content from Baravanige News

Scroll to Top