ಭಾರತದ ಅತಿ ದೊಡ್ಡ ಬಜೆಟ್ ಸಿನಿಮಾ ಎನ್ನಲಾಗುತ್ತಿರುವ ಆದಿಪುರುಷ್ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾದ ಟ್ರೈಲರ್ ಇಂದು (ಜೂನ್ 06) ಬಿಡುಗಡೆ ಆಗಿದೆ. ತಿರುಪತಿಯಲ್ಲಿ ನಡೆದ ಅದ್ಧೂರಿ ಪ್ರೀ ರಿಲೀಸ್ ಇವೆಂಟ್ನಲ್ಲಿ ಆದಿಪುರುಷ್ ಟ್ರೈಲರ್ ಅನ್ನು ಬಿಡುಗಡೆ ಮಾಡಲಾಯ್ತು. ಈ ಹಿಂದೆ ಬಿಡುಗಡೆ ಆಗಿದ್ದ ಸಿನಿಮಾದ ಟೀಸರ್ಗೆ ಅಷ್ಟೇನೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ. ಆದರೆ ಇದೀಗ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು ಟ್ರೈಲರ್ನಲ್ಲಿ ಶ್ರೀರಾಮನನ್ನು ಮಾಸ್ ಅವತಾರದಲ್ಲಿ ತೋರಿಸಲಾಗಿದೆ.
ರಾವಣ, ಸೀತೆಯನ್ನು ಹೊತ್ತುಕೊಂಡು ಹೋಗುವ ಸನ್ನಿವೇಶದಿಂದ ಆರಂಭವಾಗುವ ಆದಿಪುರುಷ್ ಟ್ರೈಲರ್ ಸಿನಿಮಾದಲ್ಲ ಬಳಸಿಕೊಳ್ಳಲಾಗಿರುವ ತಂತ್ರಜ್ಞಾನದಿಂದ ಗಮನ ಸೆಳೆಯುತ್ತಿದೆ. ಅದ್ಧೂರಿ ಸೆಟ್ಗಳು, ಅದ್ಭುತ ವಿಎಫ್ಎಕ್ಸ್ ಮೂಲಕ ರಾಮಾಯಣವನ್ನು ಭಾರಿ ಬೃಹತ್ ಆಗಿ ತೋರಿಸುವ ಪ್ರಯತ್ನವನ್ನು ನಿರ್ದೇಶಕ ಓಂ ರಾವತ್ ಮಾಡಿರುವುದು ಟ್ರೈಲರ್ನಿಂದ ಗೊತ್ತಾಗುತ್ತಿದೆ. ಹಾಗಿದ್ದರೂ ಸಹ ಕೆಲವು ಕಡೆಗಳಲ್ಲಿ ವಿಎಫ್ಎಕ್ಸ್ ತೀರ ಸಾಮಾನ್ಯ ಎನಿಸುತ್ತದೆ.
ಸ್ವತಃ ಓಂ ರಾವತ್ ಹೇಳಿರುವಂತೆ ಆದಿಪುರುಷ್ ಸಿನಿಮಾ ಒಟ್ಟಾರೆ ರಾಮಾಯಣವಲ್ಲ ಬದಲಿಗೆ ರಾಮ ಅರಣ್ಯವಾಸಿಯಾದ ಬಳಿಕ ನಡೆವ ಸನ್ನಿವೇಶಗಳ ಚಿತ್ರಣ. ಹಾಗಾಗಿ ಆದಿಪುರುಷ್ ಸಿನಿಮಾ ರಾಮ ಹಾಗೂ ರಾವಣನ ಮುಖಾಮುಖಿ ಅದರ ನಡುವೆ ನಡೆದ ಸನ್ನಿವೇಶಗಳನ್ನಷ್ಟೆ ಆಯ್ದು ಸಿನಿಮಾ ಮಾಡಲಾಗಿದೆ. ಹಾಗಾಗಿ ಸಿನಿಮಾದಲ್ಲಿ ಯುದ್ಧದ ದೃಶ್ಯಗಳು ಹೆಚ್ಚಿಗಿವೆ ಎಂಬುದನ್ನು ಟ್ರೈಲರ್ ಸಹ ಸಾರಿ ಹೇಳುತ್ತಿದೆ. ಇನ್ನು ಮರ್ಯಾದಾ ಪುರುಷೋತ್ತಮ, ಶಾಂತಮೂರ್ತಿ ಶ್ರೀರಾಮ, ಕೆಲವು ಖಡಕ್ ಡೈಲಾಗ್ಗಳನ್ನು ಹೊಡೆಯುತ್ತಿರುವಂತೆಯೂ ಚಿತ್ರಿಸಲಾಗಿದ್ದು, ಕೆಲವು ಡೈಲಾಗ್ಗಳ ಝಲಕ್ ಟ್ರೈಲರ್ನಲ್ಲಿದೆ.
ಟ್ರೈಲರ್ನಲ್ಲಿ ಶ್ರೀರಾಮ ಪಾತ್ರಧಾರಿ ಪ್ರಭಾಸ್, ಹಾಗೂ ಹನುಮಂತ ಪಾತ್ರಧಾರಿ ದೇವದತ್ತ ನಾಗೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದೆ. ಸೀತಾ ಪಾತ್ರಧಾರಿ ಕೃತಿ ಸೆನನ್ ಎರಡು ದೃಶ್ಯಗಳಲ್ಲಿ, ರಾವಣ ಪಾತ್ರಧಾರಿ ಸೈಫ್ ಅಲಿ ಖಾನ್ ಒಂದೆರಡು ಬಾರಿ ಮಾತ್ರ ಕಾಣಿಸಿಕೊಳ್ಳುತ್ತಾರೆ. ಆದರೆ ಟ್ರೈಲರ್ನಲ್ಲಿ ಸಿನಿಮಾದಲ್ಲಿ ಬಳಸಲಾಗಿರುವ ವಿಎಫ್ಎಕ್ಸ್ ಗಮನ ಸೆಳೆಯುತ್ತಿದೆ.
ಆದಿಪುರುಷ್ ಸಿನಿಮಾವನ್ನು ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಓಂ ರಾವತ್ ನಿರ್ದೇಶನ ಮಾಡಿದ್ದು, ರಾಮನ ಪಾತ್ರದಲ್ಲಿ ಪ್ರಭಾಸ್, ಸೀತೆ ಪಾತ್ರಧಾರಿ ಕೃತಿ ಸೆನನ್, ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್, ಲಕ್ಷ್ಮಣನ ಪಾತ್ರದಲ್ಲಿ ಸನ್ನಿ ಸಿಂಗ್, ಹನುಮಂತನ ಪಾತ್ರದಲ್ಲಿ ದೇವದತ್ತ ನಟಿಸಿದ್ದಾರೆ. ಸಿನಿಮಾಕ್ಕೆ ಟಿ ಸೀರೀಸ್ ಮಾಲೀಕ ಭೂಷಣ್ ಕುಮಾರ್ ಬಂಡವಾಳ ಹೂಡಿದ್ದು, ಈ ಸಿನಿಮಾ ಈವರೆಗಿನ ಭಾರತದ ಅತ್ಯಂತ ದುಬಾರಿ ಸಿನಿಮಾ ಎನ್ನಲಾಗುತ್ತಿದೆ.