ಉಡುಪಿ: 40 ಅಡಿ ಆಳದ ಬಾವಿಗಿಳಿದು ಬೆಕ್ಕನ್ನು ರಕ್ಷಿಸಿದ ಪೇಜಾವರ ಶ್ರೀಗಳು

ಉಡುಪಿ, ಜೂ 19: ಸುಮಾರು 40 ಅಡಿ ಆಳದ ಬಾವಿಗಿಳಿದು ಪೇಜಾವರ ಮಠದ 60ರ ಹರೆಯದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಬೆಕ್ಕೊಂದನ್ನು ರಕ್ಷಿಸಿದ ಘಟನೆ ಭಾನುವಾರ ನಡೆದಿದೆ.

ಸ್ವಾಮೀಜಿಯವರು ಚೆನ್ನೈನಿಂದ ಸುಬ್ರಮಣ್ಯ ಮುಚ್ಲುಕೋಡು ದೇವಸ್ಥಾನಕ್ಕೆ ಮಧ್ಯಾಹ್ನ ಆಗಮಿಸಿದ್ದರು. ಏತನ್ಮಧ್ಯೆ ದೇವಸ್ಥಾನದ ಬಾವಿಯೊಳಗೆ ಬೆಕ್ಕೊಂದು ಬಿದ್ದಿರುವುದಾಗಿ ದೇವಸ್ಥಾನದ ಸಿಬಂದಿ ಹೇಳಿದರು.

ಸ್ವಾಮೀಜಿ ತಕ್ಷಣ ಬಾವಿಯತ್ತ ತೆರಳಿ ಬಕೆಟ್‌ ಇಳಿಸಿ ಬೆಕ್ಕನ್ನುಬಕೆಟ್‌ ಒಳಗೆ ಬರುವಂತೆ ಪ್ರಯತ್ನಿಸಿದರು. ಅದು ಫ‌ಲಕಾರಿಯಾಗದಿದ್ದಾಗ, ಉಟ್ಟ ಖಾವಿಶಾಟಿಯನ್ನು ಸೊಂಟಕ್ಕೆ ಬಿಗಿಯಾಗಿ ಸುತ್ತಿ ಸುಮಾರು ಐದಡಿ ವ್ಯಾಸದ ಬಾವಿಗೆ ಹಗ್ಗದ ಸಹಾಯದಿಂದ ಇಳಿದರು. ಬೆಕ್ಕು ಹಿಡಿದು ಬಕೆಟ್ ನಲ್ಲಿ ಇರಿಸಿದರೂ ಹೆದರಿ ಹೊರಕ್ಕೆ ಹಾರಿ ಇನ್ನೊಂದು ಬಾವಿಯ ಇನ್ನೊಂದು ಅಂತಸ್ತಿನಲ್ಲಿ ಕುಳಿತುಕೊಂಡಿತು. ಬಳಿಕ ಬೆಕ್ಕನ್ನು ಕೈಯಲ್ಲಿ ಹಿಡಿದು ಒಂದೊಂದೆ ಅಂತಸ್ತನ್ನು ಏರಿ ಮೇಲೆ ್ ಬೆಕ್ಕನ್ನು ರಕ್ಷಿಸಿದರು.

ಸ್ವಾಮೀಜಿ ಮಾತ್ರ ಏನೂ ಆಗದಂತೆ ಉಡುಪಿ ಪೇಜಾವರ ಮಠಕ್ಕೆ ಪೂಜೆಗೆ ಹೊರಟರು. ಅವರು ಬೆಳಗ್ಗೆ ಚೆನ್ನೈ ಮಠದಲ್ಲಿ ಪೂಜೆ ಮುಗಿಸಿ ಆಹಾರವನ್ನೂ ತೆಗೆದುಕೊಳ್ಳದೆ ಉಡುಪಿಗೆ ಬಂದಿದ್ದರು. ಉಡುಪಿಯಲ್ಲಿ ಸಂಜೆ ಜ್ಯೋತಿಃಶಾಸ್ತ್ರಜ್ಞ ದಿ| ಬೈಲೂರು ಅನಂತಪದ್ಮನಾಭ ತಂತ್ರಿಗಳ ಜನ್ಮಶತಮಾನೋತ್ಸವದಲ್ಲಿ ಪಾಲ್ಗೊಂಡು ರಾತ್ರಿ ಮತ್ತೆ ಚೆನ್ನೈಗೆ ತೆರಳಿದರು.

ಪೇಜಾವರ ಶ್ರೀಗಳು ಮಹತ್ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಗೋವಿನ ರಕ್ಷಣೆಯಲ್ಲಿ ಶ್ರೀಗಳು ಹಾವು, ಹದ್ದು ಹೀಗೆ ಸಕಲ ಪ್ರಾಣಿ ಪಕ್ಷಿ ಸಂಕುಲ ರಕ್ಷಣೆ ಮಾಡುತ್ತಿರುವುದು ವಿಶೇಷ

Scroll to Top