ಕೋಮು ಗಲಭೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ 25 ಲಕ್ಷ ಪರಿಹಾರ : ಬಿಜೆಪಿಯವ್ರು ಹಿಂದೂಗಳಿಗೆ ಮಾತ್ರ ಪರಿಹಾರ ಕೊಟ್ರು ಸಿಎಂ ಕಿಡಿ

ಬೆಂಗಳೂರು: ರಾಜ್ಯದಲ್ಲಿ ಈ ಹಿಂದೆ ಕೋಮು ಗಲಭೆಯಿಂದ ಮೃತಪಟ್ಟವರ ಕುಟುಂಬಕ್ಕೆ ಸೋಮವಾರ ಸಿಎಂ ಸಿದ್ದರಾಮಯ್ಯ ತಲಾ 25 ಲಕ್ಷ ರೂ. ಪರಿಹಾರದ ಚೆಕ್ ವಿತರಣೆ ಮಾಡಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕೋಮು ಗಲಭೆಯಲ್ಲಿ ಹತ್ಯೆಯಾದ ಮಸೂದ್, ಫಾಝಿಲ್, ಜಲೀಲ್, ಸಮೀರ್ ಹಾಗೂ ದೀಪಕ್ ರಾವ್ ಕುಟುಂಗಳಿಗೆ ತಲಾ 25 ಲಕ್ಷ ರೂ. ಪರಿಹಾರ ಚೆಕ್ ವಿತರಣೆ ಮಾಡಿದರು. ಜೊತೆಗೆ ಕುಟುಂಬದ ತಲಾ ಒಬ್ಬರು ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿಯೂ ಭರವಸೆ ನೀಡಿದರು.

ಬಳಿಕ ಮಾತನಾಡಿದ ಸಿಎಂ, ಬಿಜೆಪಿ ಸರ್ಕಾರ ಇದ್ದಾಗ ಕೋಮುಗಲಭೆಗಳಲ್ಲಿ ಮೃತಪಟ್ಟವರಿಗೆ 25 ಲಕ್ಷ ಪರಿಹಾರ ಕೊಟ್ಟಿದಾರೆ. ಆದ್ರೆ ಬಿಜೆಪಿಯವರು ಎಲ್ಲರಿಗೂ ಪರಿಹಾರ ಕೊಟ್ಟಿಲ್ಲ, ಹಿಂದೂಗಳಿಗೆ ಮಾತ್ರ ಪರಿಹಾರ ಕೊಟ್ಟಿದ್ದಾರೆ. ಮುಸ್ಲಿಮರೂ ಕೋಮು ಗಲಭೆಗಳಲ್ಲಿ ಮೃತಪಟ್ಟಿದ್ದಾರೆ. ಸರ್ಕಾರ ಎಲ್ಲ ಧರ್ಮದವರನ್ನ ಸಮಾನವಾಗಿ ಕಾಣಬೇಕು ಎಂದು ಸಲಹೆ ನೀಡಿದರು.

ಕೋಮುಗಲಭೆಯಲ್ಲಿ ಮುಸಲ್ಮಾನರೂ ಸತ್ತಿದ್ದಾರೆ ಪರಿಹಾರ ಕೊಡಿ ಅಂತಾ ನಾನು ಸದನದಲ್ಲಿ ಪ್ರಸ್ತಾಪ ಮಾಡಿದ್ದೆ, ಬಿಜೆಪಿಯವರು ನೋಡ್ತೀವಿ, ಕೊಡ್ತೀವಿ ಅಂತಾ ಹೇಳಿ ಕೊಡಲೇ ಇಲ್ಲ. ಈಗ ನಮ್ಮ ಸರ್ಕಾರ ಪರಿಹಾರ ಕೊಡ್ತಿದೆ ಎಂದು ತಿಳಿಸಿದರು.

ಬಿಜೆಪಿಯವರು ಹರ್ಷ ಮತ್ತು ಪ್ರವೀಣ್ ನೆಟ್ಟಾರು ಕುಟುಂಬದವರಿಗೆ ಮಾತ್ರ ತಲಾ 25 ಲಕ್ಷ ಪರಿಹಾರ ಕೊಟ್ಟಿದ್ದಾರೆ. ಕುಟುಂಬದವರಿಗೆ ಒಂದೊಂದು ಕೆಲಸವನ್ನೂ ಕೊಟ್ಟಿದ್ದಾರೆ. ಅದು ಸರಿಯಿದೆ, ಆದ್ರೆ ಬೇರೆಯವರಿಗೂ ಕೊಡಬೇಕಲ್ಲ, ಆ ಕೆಲಸ ಬಿಜೆಪಿ ಮಾಡಲಿಲ್ಲ. ಮಸೂದ್, ಫಾಜೀಲ್, ಅಬ್ದುಲ್ ಜಲೀಲ್, ಇದ್ರಿಸ್ ಪಾಷ, ಸಮೀರ್, ದೀಪಕ್ ರಾವ್ ಈ 6 ಜನರ ಕುಟುಂಬಗಳಿಗೆ ಪರಿಹಾರ ಕೊಡಲಿಲ್ಲ. ಇವರ ಕುಟುಂಬಗಳಿಗೆ ಭೇಟಿ ಕೊಟ್ಟು ಸಾಂತ್ವನ ಹೇಳುವ ಕೆಲಸವನ್ನೂ ಬೊಮ್ಮಾಯಿ ಮಾಡಲಿಲ್ಲ. ನಾವು ಈಗ ಈ 6 ಜನರ ಕುಟುಂಬಗಳಿಗೆ ಪರಿಹಾರ ಕೊಟ್ಟಿದ್ದೇವೆ. ಮುಂದೆ ಕುಟುಂಬದ ತಲಾ ಒಬ್ಬ ಸದಸ್ಯರಿಗೆ ಸರ್ಕಾರಿ ಕೆಲಸವನ್ನೂ ಕೊಡ್ತೀವಿ ಎಂದು ಭರವಸೆ ನೀಡಿದರು.

ಬಿಜೆಪಿ ಮಾಡಿರುವ ತಾರತಮ್ಯವನ್ನ ನಾವು ಸರಿಪಡಿಸುವ ಕೆಲಸ ಮಾಡ್ತೇವೆ. ಹತ್ಯೆಯಾದವರ ಕುರಿತು ತನಿಖೆಯನ್ನು ಪಾರದರ್ಶಕವಾಗಿ, ಕಾನೂನಾತ್ಮಕವಾಗಿ ಮಾಡ್ತೀವಿ. ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸ್ತೀವಿ. ಇನ್ಮುಂದೆ ಕೋಮು ಗಲಭೆಗಳಿಗೆ, ನೈತಿಕ ಪೊಲೀಸ್ ಗಿರಿಗೆ ಕಡಿವಾಣ ಹಾಕುತ್ತೇವೆ. ಯಾರಿಗೂ ಕಾನೂನು ಕೈಗೆ ತೆಗೆದುಕೊಳ್ಳೋದಕ್ಕೆ ಬಿಡಲ್ಲ. ನಮ್ಮ ಸರ್ಕಾರ ಎಲ್ಲರ ರಕ್ಷಣೆ ಮಾಡಲಿದೆ. ಎಲ್ಲ ಧರ್ಮದವರ ರಕ್ಷಣೆ ಮಾಡ್ತೇವೆ, ಅದು ನಮ್ಮ ಜವಾಬ್ದಾರಿ. ಧರ್ಮಗಳ ನಡುವೆ ನಾವು ತಾರತಮ್ಯ ಮಾಡಲ್ಲ. ನಮಗೆ ಹಿಂದೂ ಮುಸ್ಲಿಂ, ಜೈನ, ಬೌದ್ಧ, ಕ್ರೈಸ್ತರು ಎಲ್ಲರೂ ಒಂದೇ. ಯಾರದ್ದೇ ಹತ್ಯೆ ಇರಲಿ ಕಾನೂನು ರೀತಿ ತನಿಖೆ ಮಾಡ್ತೀವಿ ಎಂದು ಗುಡುಗಿದರು.

Scroll to Top