ಉಡುಪಿ, ಜೂ.20: ‘ಮತಾಂತರ ನಿಷೇಧ ಕಾಯ್ದೆ ಹಾಗೂ ಗೋಹತ್ಯೆ ನಿಷೇಧ ಕಾಯ್ದೆಯನ್ನು ವಾಪಸ್ ಪಡೆಯುವ ಕಾಂಗ್ರೆಸ್ ಸರ್ಕಾರದ ಕ್ರಮ ಕಳವಳಕಾರಿಯಾಗಿದೆ’ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಮತಾಂತರ ಹಾವಳಿಯಿಂದ ಕುಟುಂಬಗಳು ಛಿದ್ರವಾಗುತ್ತಿರುವುದನ್ನು ಮನಗಂಡ ಹಿಂದಿನ ಬಿಜೆಪಿ ಸರ್ಕಾರ ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸಿತ್ತು. ಗೋ ಕಳವು ತಡೆಯಲು ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಎರಡೂ ಕಾಯ್ದೆಗಳನ್ನು ಹಿಂಪಡೆಯಲು ತೀರ್ಮಾನಿಸಿರುವುದು ಕಳವಳಕಾರಿಯಾಗಿದೆ. ಕಾನೂನುಗಳ ಹಿಂಪಡೆಯುವ ದುಸ್ಸಾಹಸ ಮಾಡಬಾರದು ಎಂದು ಸ್ವಾಮೀಜಿ ಹೇಳಿದ್ದಾರೆ.
ಜನಾಭಿಪ್ರಾಯ ಪಡೆದು ಎರಡೂ ಕಾಯ್ದೆಗಳನ್ನು ಹಿಂಪಡೆಯದೆ ತಟಸ್ಥ ನಿಲುವು ತಾಳಬೇಕು ಎಂದು ಒತ್ತಾಯಿಸಿದ್ದಾರೆ. ಅದಮಾರು ಮಠದ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಕೂಡ ಮತಾಂತರ ಹಾಗೂ ಗೋಹತ್ಯೆ ನಿಷೇಧ ಕಾಯ್ದೆ ಹಿಂಪಡೆಯುವ ನಿಲುವು ಮರು ಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮತಾಂತರ ಹಾಗೂ ಗೋಹತ್ಯೆ ವಿಚಾರಗಳು ಧರ್ಮ, ಸಂಸ್ಕೃತಿಯ ರಕ್ಷಣೆಗೆ ಸಂಬಂಧಿಸಿದ್ದಾಗಿದ್ದು, ರಾಜಕಾರಣ ಮಾಡಬಾರದು, ಎರಡೂ ಕಾಯ್ದೆಗಳನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದ್ದಾರೆ.