ಮಂಗಳೂರು ಸಂಚಾರ ಪೊಲೀಸ್ ಠಾಣೆಯಲ್ಲಿ ನಿಲ್ಲಿಸಲಾದ ಕಾರಿನ ಬ್ಯಾನರ್ ವೈರಲ್ : “ನಾನು ಅನಾಥನಾಗಿದ್ದೇನೆ ನನ್ನ ಪರಿಸ್ಥಿತಿ ಯಾರಿಗೂ ಬಾರದಿರಲಿ”..!!!

ಮಂಗಳೂರು : ವಾಹನಗಳಲ್ಲಿ ಚಾಲನೆ ಮಾಡುವವರು ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ಕೂಡಾ ಹಲವು ಬಾರಿ ದುರಂತಗಳು ನಡೆಯುತ್ತಲೇ ಇರುತ್ತವೆ. ಸೂಕ್ತ ದಾಖಲೆ ಪತ್ರಗಳು ಇಲ್ಲದೇ ಇದ್ದಾಗ ಪೊಲೀಸರನ್ನು ಕಂಡು ಹೆದರಿ ತಪ್ಪಿಸಿಕೊಳ್ಳುವ ಭರದಲ್ಲಿ ವಾಹನಗಳು ಅಪಾಯಕ್ಕೀಡಾಗಿರುವ ಹಲವು ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ. ಹೀಗಿದ್ದರೂ ಕೂಡಾ ವಾಹನ ಸವಾರರು ಬೇಜವಾಬ್ದಾರಿಯ, ನಿರ್ಲಕ್ಷ್ಯದ ಚಾಲನೆ ಮಾಡಿ ದುರಂತಗಳಿಗೆ ಕಾರಣರಾಗುತ್ತಾರೆ.

ವಾಹನ ಅಪಘಾತಗಳಾದ ಬಳಿಕ ಅಪಘಾತಕ್ಕೀಡಾದ ವಾಹನಗಳನ್ನು ಪೊಲೀಸರು ಮುಟ್ಟುಗೋಲು ಹಾಕಿ ಅದನ್ನು ಪೊಲೀಸ್ ಠಾಣೆ ಬಳಿ ತಂದಿರಿಸುತ್ತಾರೆ.

ಇಂತಹ ಹಲವು ವಾಹನಗಳನ್ನು ಠಾಣೆ ಪಕ್ಕದಲ್ಲಿ ತಂದಿಟ್ಟಿರುವುದನ್ನು ನೋಡ ಬಹುದಾಗಿದೆ.

ಇದೇ ರೀತಿ ಅಪಘಾತಕ್ಕೀಡಾದ ವಾಹನವು ಚಾಲಕರಲ್ಲಿ ಜಾಗೃತಿ ಮೂಡಿಸುವಂತೆ ಒಂದು ಎಚ್ಚರಿಕೆ ಫಲಕವನ್ನು ಹಾಕಿರುವುದು ಸಾರ್ವಜನಿಕರ ಗಮನಕ್ಕೆ ಬಂದಿದ್ದು, ಇದು ಕಾಲ್ಪನಿಕವಾದರೂ ಸತ್ಯ ಸಂಗತಿಯಾಗಿದೆ.

ಕದ್ರಿಯಲ್ಲಿರುವ ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆ ಸಮೀಪದಲ್ಲಿ ಅಪಘಾತಕ್ಕೀಡಾದ ನ್ಯಾನೋ ಕಾರೊಂದನ್ನು ತಂದಿರಿಸಲಾಗಿದೆ. ಇಲ್ಲಿ ಕಾರಿನ ಹೇಳಿಕೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದೆ.

ಕಾರಿನ ಮೇಲ್ಬಾಗದಲ್ಲಿ ‘ನನ್ನ ಹೆಸರು ನ್ಯಾನೋ ಕಾರು, ನನ್ನ ಮಾಲೀಕ ಇನ್ಸೂರೆನ್ಸ್ ಮಾಡಿಲ್ಲ. ಜೂನ್ 11ರಂದು ಯೆಯ್ಯಾಡಿ ಜಂಕ್ಷನ್‌ನಲ್ಲಿ ಮಾಲಕನ ಅಜಾಗರೂಕತೆಯಿಂದ ಅಪಘಾತ ನಡೆದಿದ್ದು, ಬೈಕ್ ಸವಾರ ಸಾವನ್ನಪ್ಪಿದ್ದಾನೆ. ಆದರೆ ವಿಮೆ ಇಲ್ಲದ ಕಾರಣ ನನ್ನನ್ನು ಪೊಲೀಸ್ ಠಾಣೆಯ ಮುಂಭಾಗದಲ್ಲಿ ಇರಿಸಲಾಗಿದೆ.

ನಾನು ಅನಾಥವಾಗಿದ್ದೇನೆ. ನನ್ನ ಪರಿಸ್ಥಿತಿ ಬೇರೆ ಯಾರಿಗೂ ಬಾರದಿರಲಿ,ನಿಮ್ಮ ವಾಹನಕ್ಕೆ ವಿಮೆ ಮಾಡಿಸಿ’ ಎಂದು ಅದರಲ್ಲಿ ಬರೆಯಲಾಗಿದೆ.

ಕಾರಿಗೆ ಹಾಕಿರುವ ಬ್ಯಾನರ್ ನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ..

Scroll to Top