ಬೆಂಗಳೂರು, ಜೂ.29: ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡೋಕೆ ಜೂನ್ 30 ಅಂದರೆ ಶುಕ್ರವಾರ ಕೊನೆಯ ದಿನವಾಗಿದೆ.
ಕಳೆದ ಮೂರು ತಿಂಗಳಲ್ಲಿ ಆದಾಯ ತೆರಿಗೆ ಇಲಾಖೆಯು ಹಲವು ಬಾರಿ ದಿನಾಂಕವನ್ನು ವಿಸ್ತರಣೆ ಮಾಡಿತ್ತು. ಬಳಿಕ 2023ರ ಜೂನ್ 30ರ ವರೆಗೆ ಅವಧಿ ವಿಸ್ತರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿತ್ತು. ಇದೀಗ ಪ್ಯಾನ್- ಆಧಾರ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳಲು ನಾಳೆ ಕೊನೆಯ ದಿನವಾಗಿದೆ. ಹೀಗಾಗಿ ಲಿಂಕ್ ಮಾಡಿಸದಿದ್ದವರು ಇಂದೇ ಈ ಕೆಲಸ ಮಾಡಿಕೊಳ್ಳಿ.
ಒಂದು ವೇಳೆ ನಾಳೆ (ಶುಕ್ರವಾರ) ಯ ಒಳಗೆ ನಿಮ್ಮ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡಿಸದಿದ್ದರೆ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ. ಜೊತೆಗೆ ಟ್ಯಾಕ್ಸ್ ಪೇ ಮಾಡುವವರಿಗೂ ಕೂಡ ಸಂಕಷ್ಟವಾಗಲಿದೆ.
ಲಿಂಕ್ ಮಾಡುವುದು ಏಕೆ.?: ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಹೊಂದಿರುವುದನ್ನು ತಪ್ಪಿಸುವ ಉದ್ದೇಶದಿಂದ ಆಧಾರ್ ಜೊತೆಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಿಸಬೇಕು ಎಂದು ಆದೇಶ ಹೊರಡಿಸಲಾಗಿತ್ತು. ಪ್ಯಾನ್ ಜೊತೆಗೆ ಆಧಾರ್ ಜೋಡಿಸುವ ವ್ಯವಸ್ಥೆಯನ್ನು 2017ರ ಏಪ್ರಿಲ್ನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು. ಆಗ ಪ್ಯಾನ್-ಆಧಾರ್ ಜೋಡಣೆಗೆ ಸರ್ಕಾರ ಯಾವುದೇ ಶುಲ್ಕ ವಿಧಿಸಿರಲಿಲ್ಲ. ಆದರೆ ನಿರೀಕ್ಷಿತ ಮಟ್ಟದಲ್ಲಿ ಆಧಾರ್- ಪ್ಯಾನ್ ಲಿಂಕ್ ಕಾರ್ಯಗತವಾಗಲಿಲ್ಲ. ಹೀಗಾಗಿ ಲಿಂಕ್ಗೆ ಹಲವು ಬಾರಿ ದಿನಾಂಕ ವಿಸ್ತರಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು.
ಒಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತೆ ಆಧಾರ್ ಪ್ಯಾನ್ ಕಾರ್ಡ್ ಲಿಂಕ್ಗೆ ಮತ್ತೆ ಅವಧಿ ವಿಸ್ತರಣೆ ಮಾಡುತ್ತಾ? ಅಥವಾ ನಾಳೆಯೇ ಆಧಾರ್ ಪ್ಯಾನ್ ಕಾರ್ಡ್ ಲಿಂಕ್ಗೆ ಅವಧಿ ಮುಗಿಯುತ್ತಾ ಎಂಬುದನ್ನು ಕಾದು ನೋಡಬೇಕಿದೆ.