ಸುರತ್ಕಲ್ : ತಿರುಪತಿ ಸಮೀಪದ ಜಲಪಾತವೊಂದಕ್ಕೆ ಪ್ರವಾಸಿಗನಾಗಿ ತೆರಳಿದ್ದ ಮಂಗಳೂರಿನ ಯುವಕ ಜಲಪಾತದಲ್ಲಿ ಮುಳುಗಿ ಸಾವನ್ನಪ್ಪಿದ್ದ ಘಟನೆ ನಡೆದಿದೆ.
ಸುರತ್ಕಲ್ ಸಮೀಪದ ಹೊನ್ನಕಟ್ಟೆಯ ನಿವಾಸಿ ಸುಮಂತ್ ಅಮೀನ್ (23) ಮೃತಪಟ್ಟ ಯುವಕ.
ಈತ ಪ್ರವಾಸಿಗನಾಗಿ ತಿರುಪತಿಗೆ ತೆರಳಿದ್ದು, ಅಲ್ಲಿನ ಜಲಪಾತಕ್ಕೆ ಧುಮುಕಿ ಬಳಿಕ ಮೇಲೆ ಏರಲಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಚೆನ್ನೈಯ ರಾಜೀವ ಗಾಂಧಿ ವಿಶ್ವವಿದ್ಯಾನಿಲಯದಲ್ಲಿ ಎಂಎಸ್ಸಿ ಕಲಿಯುತ್ತಿರುವ ಸುಮಂತ್ ಅಮೀನ್ ಶುಕ್ರವಾರ ತನ್ನ ತಂದೆಯ ಬಳಿ ತಿರುಪತಿಗೆ ಹೋಗುವುದಾಗಿ ಹೇಳಿದ್ದರು ಎನ್ನಲಾಗಿದೆ.
ಮಧ್ಯಾಹ್ನ 2:30ರ ವೇಳೆಗೆ ತಿರುಪತಿಯಿಂದ 60 ಕಿ.ಮೀ. ದೂರದ ತಲಕೋನ ಜಲಪಾತಕ್ಕೆ ತನ್ನ ಸಹಪಾಠಿ ಜೊತೆ ಹೋಗಿ ಸ್ನಾನ ಮಾಡುತ್ತಾ ಬಂಡೆಕಲ್ಲಿನಿಂದ 10 ಅಡಿ ಕೆಳಕ್ಕೆ ಧುಮುಕಿದಾಗ ನೀರು ಹಾದು ಹೋಗುವ ಗುಹೆಗೆ ಕಾಲು ಸಿಲುಕಿದೆ ಎನ್ನಲಾಗಿದೆ. ತಕ್ಷಣ ಇತರ ಸ್ನೇಹಿತರು ಸುಮಂತ್‌ನನ್ನು ಪಾರು ಮಾಡಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಬಳಿಕ ಮನೆಯವರ ಗಮನಕ್ಕೆ ತಂದಿದ್ದು, ರವಿವಾರ ಮೃತದೇಹವನ್ನು ಕುಳಾಯಿ ಹೊನ್ನೆಕಟ್ಟೆಯಲ್ಲಿರುವ ಮನೆಗೆ ತಂದು ಬಳಿಕ ಅಂತ್ಯ ಸಂಸ್ಕಾರ ಮಾಡಲಾಯಿತು.
ಸುಮಂತ್ ಅಮೀನ್ ಪ್ರವಾಸ, ಡಾಕ್ಯುಮೆಂಟರಿ, ಫೊಟೋಗ್ರಫಿಯ ಹವ್ಯಾಸ ಬೆಳೆಸಿಕೊಂಡಿದ್ದರು.
ಸುಮಂತ್ ತಂದೆ ಕೆನರಾ ಬ್ಯಾಂಕ್ ಮ್ಯಾನೇಜರ್ ಸುರೇಶ್ ಅಮೀನ್, ತಾಯಿ ಕೆಂಜಾರು ಸರಕಾರಿ ಶಾಲೆಯ ಮುಖ್ಯಶಿಕ್ಷಕಿ ಉಮಾಕ್ಷಿ ಹಾಗೂ ತಂಗಿಯನ್ನು ಅಗಲಿದ್ದಾರೆ.