ಶಿರ್ವ : ಸಾಮಾಜಿಕ ಜಾಲತಾಣದಲ್ಲಿ ಹೇಯ ಕೃತ್ಯದೊಂದಿಗೆ ಹಿಂದೂ ಧರ್ಮವನ್ನು ಅವಹೇಳನ ಮಾಡುವ ರೀತಿಯಲ್ಲಿ ಪೋಸ್ಟ್ ಮಾಡಿದ ಚಿತ್ರವನ್ನು ಹಂಚಿಕೊಂಡ ಬೆಳಪು ನಿವಾಸಿ ಮೊಹಮ್ಮದ್ ಸಿದ್ಧೀಕ್(48) ಎಂಬಾತನ ಮೇಲೆ ಸುಮೊಟೊ ಪ್ರಕರಣ ದಾಖಲಾಗಿದೆ.
ಆರೋಪಿಯನ್ನು ಬಂಧಿಸಲಾಗಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾದ ಮಧ್ಯಪ್ರದೇಶದ ಸಿದಿ ಜಿಲ್ಲೆಯ ಪ್ರವೇಶ್ ಶುಕ್ಲ ಎಂಬ ಬಿಜೆಪಿ ಮುಖಂಡ ಬುಡಕಟ್ಟು ಜನಾಂಗಕ್ಕೆ ಸೇರಿದ ವ್ಯಕ್ತಿಯ ತಲೆಯ ಮೇಲೆ ಮೂತ್ರವಿಸರ್ಜನೆ ಮಾಡುತ್ತಿರುವ ವೀಡಿಯೋ ವೈರಲ್ ಆಗಿತ್ತು. ಈ ಕೃತ್ಯವನ್ನು ಹೋಲುವಂತೆ ಓರ್ವ ಹಿಂದೂ ಸಮುದಾಯಕ್ಕೆ ಸೇರಿದ ವ್ಯಕ್ತಿ ತನ್ನ ಎದುರು ಕುಳಿತಿರುವ ಮತ್ತೂಬ್ಬ ವ್ಯಕ್ತಿಯ ತಲೆಯ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿರುವಂತೆ ಇರುವ ಚಿತ್ರದ ಜತೆಗೆ ಹಿಂದೂ ಸಂಸ್ಕೃತಿ ಬೇಕಾ? ನಾಗಪುರದ ಹಿಂದೂತ್ವ ಸಂಸ್ಕೃತಿ ಬೇಕಾ ಎನ್ನುವ ಒಕ್ಕಣೆ ಸೇರಿರುವ ಫೇಸ್ ಬುಕ್ ಪೇಜನ್ನು ಅನ್ಸಾರ್ ರೋಯಲ್ ಎಂಬ ಹೆಸರಿನ ಫೇಸ್‌ಬುಕ್ ಖಾತೆ ಹೊಂದಿರುವ ವ್ಯಕ್ತಿ ಶೇರ್ ಮಾಡಿದ್ದನು. ಇದನ್ನು ಜು. 5ರಂದು ರಾತ್ರಿ ಮೊಹಮ್ಮದ್ ಸಿದ್ಧೀಕ್ ತನ್ನ ಫೇಸ್ ಬುಕ್ ಪೇಜ್‌ನಲ್ಲಿ ಹಂಚಿಕೊಂಡಿದ್ದಾನೆ.
ಈತ ಮುಸ್ಲಿಂ ಸಮುದಾಯಕ್ಕೆ ಸೇರಿದವನಾಗಿದ್ದು , ಚಿತ್ರದಲ್ಲಿರುವ ಹೇಯ ಕೃತ್ಯದೊಂದಿಗೆ ಹಿಂದೂ ಧರ್ಮವನ್ನು ಹೋಲಿಕೆ ಮಾಡಿ ಅವಹೇಳನ ಮಾಡುವ ರೀತಿಯಲ್ಲಿ ಪೋಸ್ಟ್ ಮಾಡಿದ್ದಾನೆ. ಇದು ಸಮಾಜದಲ್ಲಿ ಹಿಂದು ಮತ್ತು ಮುಸ್ಲಿಂ ಸಮುದಾಯಗಳ ನಡುವೆ ದ್ವೇಷದ ಭಾವನೆ ಉಂಟು ಮಾಡಿ,ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸಿದ್ದು, ಈತನ ಮೇಲೆ ಶಿರ್ವ ಠಾಣೆಯಲ್ಲಿ ಸುಮೊಟೊ ಪ್ರಕರಣ ದಾಖಲಾಗಿದೆ.
ಶಿರ್ವ : ಫೇಸ್ಬುಕ್ ನಲ್ಲಿ ಹಿಂದೂ ಧರ್ಮದ ಅವಹೇಳನ : ಓರ್ವನ ಬಂಧನ
