ಬೆಂಗಳೂರು : ವಿಧಾನಸಭೆ ಅಧಿವೇಶನದಲ್ಲಿ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮತ್ತು ಸಚಿವ ಎಂ.ಬಿ.ಪಾಟೀಲ್ ನಡುವೆ ಜಟಾಪಟಿ ನಡೆಯುತ್ತಿದ್ದಾಗ ಸ್ಪೀಕರ್ ಯು.ಟಿ.ಖಾದರ್ ತುಳು ಭಾಷೆಯಲ್ಲಿ ಗದರಿರುವ ಘಟನೆ ನಡೆದಿದೆ.
ಯತ್ನಾಳ್ ಮತ್ತು ಸಚಿವ ಎಂ.ಬಿ.ಪಾಟೀಲ್ ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದಾಗ ಸ್ಪೀಕರ್ ಕುಳಿತುಕೊಳ್ಳುವಂತೆ ಜೋರು ದನಿಯಲ್ಲಿ ಗದರಿದ್ದಾರೆ. ಆದರೆ ಯತ್ನಾಳ್ ಮಾತು ಕೇಳದೇ ಇದ್ದಾಗ ಖಾದರ್ ಕೊನೆಗೆ ಹತ್ತಿರದಲ್ಲೇ ಇದ್ದ ಸುನಿಲ್ ಕುಮಾರ್ ಬಳಿ ಖಾದರ್ ‘ಅರೆಡಾ ಪನ್ಲೆಯಣ್ಣಾ..’ (ಅವರಿಗೊಂದು ಹೇಳಿಯಪ್ಪಾ..) ಎಂದು ಹೇಳಿದ್ದಾರೆ.
ಇನ್ನು ತುಳು ಭಾಷೆ ಅರ್ಥವಾಗದ ಯತ್ನಾಳ್ ಖಾದರ್ ಸಾಹೇಬ್ರ ಕನ್ನಡ ಅರ್ಥ ಮಾಡಿಸ್ಲಿಕ್ಕೆ ಒಂದು ಆಪ್ ಮಾಡಿಕೊಡಿ ಎಂದು ಕಿಚಾಯಿಸಿದ್ದಾರೆ.
ಸಮಸ್ಯೆ ಏನೆಂದರೆ ನಮ್ಮ ಕನ್ನಡ ಬೇರೆ ಹಾಗೂ ಮೈಸೂರು ಕನ್ನಡ ಬೇರೆ, ಹೈದರಾಬಾದ್ ಕನ್ನಡ ಮುಂಬೈ ಕನ್ನಡ ಬೇರೆ. ಮಂಗಳೂರು ಕನ್ನಡ ಸುಂದರ ಭಾಷೆ. ನಮಗೆ ನಿಮ್ಮ ಕನ್ನಡ ಭಾಷೆ ಅರ್ಥ ಆಗಬೇಕು. ಅದಕ್ಕೆ ಆಪ್ ಹಾಕಿಕೊಡಿ. ಅವಾಗ ನಮಗೆ ಅರ್ಥ ಆಗುತ್ತದೆ ಎಂದಿದ್ದಾರೆ.
ಮೊಬೈಲ್ ನಲ್ಲಿ ಯುಎಸ್ ಇಂಗ್ಲಿಷ್, ಇಂಗ್ಲೆಂಡ್ ಇಂಗ್ಲಿಷ್ ಇದ್ದ ಹಾಗೆ ಅದೇ ರೀತಿಯಲ್ಲಿ ಲೋಕಸಭೆಯಲ್ಲಿ ಹಿಂದಿ ಟು ಕನ್ನಡ ಕನ್ನಡ ಟು ಹಿಂದಿ ಇದ್ದ ಹಾಗೆ ಸ್ಪೀಕರ್ ಟು ಕನ್ನಡ ಮಾಡಿ ಎಂದು ಹೇಳಿದ್ದಾರೆ.