ಉಡುಪಿ : ಕಳೆದ ಎರಡು ದಿನಗಳಿಂದ ಸುಯುತ್ತಿರುವ ಮಹಾ ಮಳೆಗೆ ಜಿಲ್ಲೆಯಲ್ಲಿ ಒಟ್ಟು 7 ಜನರು ಸಾವನ್ನಪ್ಪಿರುವಂತಹ ಘಟನೆ ನಡೆದಿದೆ.
ಗಾಳಿ ಮಳೆಗೆ ಮನೆಗಳು ಕುಸಿದಿದ್ದು, ಕೆಲವು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಮಳೆ ಅನಾಹುತಗಳಿಂದ ಮೃತ ಎರಡು ಕುಟುಂಬಗಳಿಗೆ ಸ್ಥಳದಲ್ಲಿಯೇ ತಲಾ 5 ಲಕ್ಷ ರೂ. ಪರಿಹಾರ ವಿತರಣೆ ಮಾಡಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಾಂತ್ವನ ಹೇಳಿದ್ದಾರೆ.
ಮೃತಪಟ್ಟ ಇತರೆ ಕುಟ್ಟುಂಬಗಳ ಮಾಹಿತಿ ಪಡೆದು ಪರಿಹಾರ ನೀಡಲಿದ್ದಾರೆ. ಮನೆಗಳ ಕುಸಿತ, ಹಾನಿಯಾದವರಿಗೂ ಶೀಘ್ರದಲ್ಲೇ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.
ಸಾಂತ್ವನ ಬಳಿಕ ಉಡುಪಿಯ ಪಡುಬಿದ್ರಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿದ್ದು, ಉಡುಪಿಯಲ್ಲಿ ತಡವಾದರೂ ಕೂಡ ಜೋರಾಗಿ ಮಳೆ ಬರುತ್ತಿದೆ. ಬಜೆಟ್ ಇದ್ದ ಕಾರಣ ನಿನ್ನೆ ಉಡುಪಿಗೆ ಭೇಟಿ ನೀಡಲು ಸಾಧ್ಯವಾಗಿಲ್ಲ. ಡಿಸಿ ಜೊತೆ ಹಾಗೂ ಶಾಸಕರ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ಕಡಲ ಕೊರೆತದಿಂದ ಸಾಕಷ್ಟು ಭೂಪ್ರದೇಶ ಹಾನಿಯಾಗಿದೆ ಎಂದರು.
ಜಿಲ್ಲೆಯಲ್ಲಿ ಮಳೆಗೆ 7 ಮಂದಿ ಮೃತಪಟ್ಟಿದ್ದು, ಹಲವು ಮನೆಗಳಿಗೆ ಹಾನಿಯಾಗಿದೆ. ಜಿಲ್ಲಾಧಿಕಾರಿಗಳ ಜೊತೆ ಪುನರ್ ಪರಿಶೀಲನಾ ಸಭೆ ಮಾಡುತ್ತೇನೆ. ಕಡಲ ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ ಕೈಗೊಳ್ಳುತ್ತೇವೆ. ಮುಂಜಾಗ್ರತಾ ಕ್ರಮಕೈಗೊಳ್ಳಲು ಈಗಾಗಲೇ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಮೃತಪಟ್ಟ 7 ಜನರ ಕುಟುಂಬಸ್ಥರಿಗೆ ಹಣ ಹಾಕಿದ್ದೇವೆ. ಮೃತಪಟ್ಟವರ ಕುಟುಂಬಕ್ಕೆ 24 ಗಂಟೆಯೊಳಗೆ ಪರಿಹಾರ ವಿತರಣೆ ಮಾಡಲಾಗುವುದು. ಮನೆಗಳಿಗೆ ಹಾನಿಯಾದರೆ ಎ, ಬಿ, ಸಿ ಅಂತ ವಿಂಗಡಿಸಿ ಪರಿಹಾರ ನೀಡುತ್ತೇವೆ. ಎಂದರು.
ಕಾಲು ಸಂಕದ ಸಮಸ್ಯೆ ಜಿಲ್ಲೆಯಲ್ಲಿ ಇದೆ. ಕಾಲು ಸಂಕದ ಬಗ್ಗೆ ಮೊದಲು ತಿಳಿದುಕೊಳ್ಳುತ್ತೇನೆ. ಬಳಿಕ ಶಾಶ್ವತವಾದ ಕಾಲು ಸಂಕ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.