ಕಾಪು ಬೀಚ್‌ನಲ್ಲಿ ಕಡಲು ಪ್ರಕ್ಷುಬ್ಧ : ಲೈಟ್‌ಹೌಸ್ ಪ್ರವೇಶ ನಿರ್ಬಂಧ..!

ಉಡುಪಿ: ಕಾಪು ಬೀಚ್‌ನಲ್ಲಿ ಕಡಲು ಪ್ರಕ್ಷುಬ್ಧಗೊಂಡಿದ್ದು, ಈ ಹಿನ್ನೆಲೆಯಲ್ಲಿ ಲೈಟ್‌ಹೌಸ್ ಪಕ್ಕದಲ್ಲಿ ಸಾರ್ವಜನಿಕರಿಗೆ ಸಮುದ್ರಕ್ಕೆ ಇಳಿಯಲು ಮತ್ತು ಲೈಟ್‌ಹೌಸ್ ಬಂಡೆ ಮೇಲಿನ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಕಡಲು ಪ್ರಕ್ಷುಬ್ಧಗೊಂಡು, ಲೈಟ್‌ಹೌಸ್ ಬಳಿ ಸಮುದ್ರ ಮತ್ತು ಹಿನ್ನೀರಿನ ಹೊಳೆ ಪರಸ್ಪರ ಜೋಡಣೆಯಾಗಿದೆ.

ಇದರಿಂದಾಗಿ ಲೈಟ್‌ಹೌಸ್ ಇರುವ ಬಂಡೆ ಮೇಲೆ ಪ್ರವೇಶಿಸುವುದೇ ಕಷ್ಟಕರವಾಗಿದೆ. ಇಷ್ಟಿದ್ದರೂ ಕೆಲವು ಮಂದಿ ಪ್ರವಾಸಿಗರು ಪ್ರಯಾಸಪಟ್ಟು ಮೆಟ್ಟಿಲುಗಳನ್ನೇರಿ ಲೈಟ್ ಹೌಸ್ ಪಕ್ಕಕ್ಕೆ ತೆರಳಲು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ಆ ಪ್ರದೇಶಕ್ಕೆ ಹೋಗುವುದನ್ನೇ ನಿರ್ಬಂಧಿಸಿ ಹಗ್ಗ ಕಟ್ಟಿ ಎಚ್ಚರಿಕೆ ಫಲಕ ಅಳವಡಿಸಲಾಗಿದೆ.

ಈಗಾಗಲೇ ಸಮುದ್ರ ಎರಡು ಅಡಿಗಳಷ್ಟು ಆಳದವರೆಗಿನ ಮರಳನ್ನು ತನ್ನ ಒಡಲಿಗೆ ಎಳೆದುಕೊಂಡಿದ್ದು ಲೈಟ್ ಹೌಸ್ ಮತ್ತು ಸಮುದ್ರದ ನಡುವೆ ಒಂದೂವರೆ ಅಡಿಯಷ್ಟು ಆಳಕ್ಕೆ ಇಳಿದಿದೆ.

ಇದರಿಂದಾಗಿ ಲೈಟ್‌ಹೌಸ್ ಹೋಗುವ ದಾರಿ ಬಂದ್ ಆಗಿದೆ.

ಕಳೆದ 3- 4 ದಿನಗಳಿಂದ ಲೈಟ್ ಹೌಸ್‌ಗೂ ಬೀಗ ಜಡಿಯಲಾಗಿದ್ದು, ಪ್ರವಾಸಿಗರಿಗೆ ಒಳಗೆ ಪ್ರವೇಶಿಸಲು ಅವಕಾಶ ನಿರಾಕರಿಸಲಾಗಿದೆ.

ಕಾಪು ಬೀಚ್‌ನಲ್ಲಿ ಸುಮಾರು 200- 300 ಮೀಟರ್ ಉದ್ದದವರೆಗೂ ಸಮುದ್ರಕ್ಕೆ ಇಳಿಯುವುದು ಅಪಾಯಕಾರಿ ಎಂಬ ಫಲಕ ಅಳವಡಿಸಲಾಗಿದ್ದು, ಪೊಲೀಸ್ ಮತ್ತು ಗೃಹರಕ್ಷದಳ ಸಿಬಂದಿ ಹಾಗೂ ಬೀಚ್ ನಿರ್ವಹಣಾ ಸಿಬಂದಿ ಹಗಲು ರಾತ್ರಿ ಬೀಚ್‌ನಲ್ಲಿ ಕಾವಲು ಕಾಯುವಂತಾಗಿದೆ.

ರವಿವಾರ ರಜಾದಿನವಾಗಿದ್ದರಿಂದ ಹೊರಗಿನ ಪ್ರವಾಸಿಗರು ಬೀಚ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು ಅವರಿಗೆ ಪದೇ ಪದೇ ಎಚ್ಚರಿಕೆ ನೀಡಿ ಭದ್ರತಾ ಸಿಬಂದಿ ಹೈರಾಣಾಗಿದ್ದಾರೆ.

You cannot copy content from Baravanige News

Scroll to Top