ಕುಂದಾಪುರ, ಜು 13: ಪತಿಯನ್ನು ತ್ಯಜಿಸಿದ್ದ ಹೊರರಾಜ್ಯದ ಮಹಿಳೆಯನ್ನು ಪ್ರೀತಿಸಿ ಮದುವೆಯಾಗಿ ಕುಂದಾಪುರ ನಗರ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದ ವ್ಯಕ್ತಿಯೋರ್ವ ಮಹಿಳೆಯ ಅಪ್ರಾಪ್ತ ವಯಸ್ಕ ಮಹಿಳೆ ಮೇಲೆ ನಿರಂತರ ಲೈಂಗಿಕ ದೌರ್ಜನ್ಯವೆಸಗಿದ ಘಟನೆ ಬೆಳಕಿಗೆ ಬಂದಿದೆ.
ದೂರು ದಾಖಲಾದ ಹಿನ್ನಲೆಯಲ್ಲಿ ತನಿಖೆ ನಡೆಸಿದ ಕುಂದಾಪುರ ಪೊಲೀಸರ ತಂಡ ಪೊಕ್ಸೋ ಪ್ರಕರಣದ ಆರೋಪಿಯನ್ನು ಬಂಧಿಸಿದ್ದಾರೆ. ಆರೊಪಿಯನ್ನು ಬೈಂದೂರಿನ ನಿವಾಸಿ ಸೊಹೇಲ್ ಎಂದು ಗುರುತಿಸಲಾಗಿದೆ. ಆರೋಪಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಪತಿಯನ್ನು ತ್ಯಜಿಸಿದ್ದ ಇಬ್ಬರು ಮಕ್ಕಳಿದ್ದ ಹೊರ ರಾಜ್ಯದ ಮಹಿಳೆಯನ್ನು ಸೊಹೇಲ್ ಪ್ರೀತಿಸಿ ಮದುವೆಯಾಗಿದ್ದ. ನಂತರ ಇವರಿಬ್ಬರು ಕುಂದಾಪುರ ಠಾಣಾ ವ್ಯಾಪ್ತಿಯಲ್ಲಿರುವ ಮನೆಯಲ್ಲಿ ವಾಸವಾಗಿದ್ದರು. ಈ ವೇಳೆ ಮಹಿಳೆಯ ಮಗಳಿಗೆ ಸೊಹೇಲ್ ಲೈಂಗಿಕ ಕಿರುಕುಳ ನೀಡುತ್ತಿದ್ದನು. ಅದಕ್ಕಾಗಿ ಆಕೆ ಆತನಿಂದ ದೂರ ಹೋಗಿ ಬೇರೆಡೆ ಬಾಡಿಗೆ ಮನೆಯಲ್ಲಿ ತನ್ನ ಮಕ್ಕಳೊಂದಿಗೆ ವಾಸವಾಗಿದ್ದರು. ಬಾಡಿಗೆ ಮನೆಯಲ್ಲಿದ್ದ ಆಕೆ ಹಾಗೂ ಅವಳ ಮಗಳನ್ನು ಆತನ ಮನೆಗೆ ಕರೆದೊಯ್ದು ಇಬ್ಬರನ್ನು ಕೋಣೆಯಲ್ಲಿ ಕೂಡಿ ಹಾಕಿ, ಮಲ ಮಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದನು ಎಂದು ದೂರಲಾಗಿದೆ.
ಬಿಡಿಸಲು ಬಂದ ಬಾಲಕಿಯ ತಾಯಿಗೆ ಹಲ್ಲೆ ನಡೆಸಿ ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿದ್ದನು. ಬಳಿಕ ಮಹಿಳೆ ಆರೋಪಿಯನ್ನು ದೂಡಿ ತನ್ನ ಮಗಳನ್ನು ಆತನಿಂದ ತಪ್ಪಿಸಿಕೊಂಡು ಬಂದು, ತನ್ನನ್ನು ಹಾಗೂ ಮಗಳನ್ನು ಕೊಲ್ಲುವುದಾಗಿ ಬೆದರಿಸಿ ಮಲ ಮಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗುತ್ತಿದ್ದ ಎಂದು ಕುಂದಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.