ಉಡುಪಿ, ಜು 20: ಉಡುಪಿ ನಗರಸಭಾ ವ್ಯಾಪ್ತಿಯ ಮಣಿಪಾಲದಲ್ಲಿ ಇಂದು ನಿಷೇಧಿತ ಪ್ಲಾಸ್ಟಿಕ್ಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳಿಗೆ ದಾಳಿ ನಡೆಸಿ 158 ಕೆ.ಜಿ. ನಿಷೇಧಿತ ಪ್ಲಾಸ್ಟಿಕ್ಗಳನ್ನು ವಶಪಡಿಸಿಕೊಂಡು, ರೂ. 24,000 ದಂಡ ವಿಧಿಸಲಾಯಿತು.
ನಗರಸಭೆಯ ಪರಿಸರ ಅಭಿಯಂತರರು, ಹಿರಿಯ ಆರೋಗ್ಯ ನಿರೀಕ್ಷಕರು, ಕಿರಿಯ ಆರೋಗ್ಯ ನಿರೀಕ್ಷಕರು, ನ್ಯಾನೀಟರಿ ಸೂಪರ್ವೈಸರ್ನವರು ಹಾಗೂ ಪೌರಕಾರ್ಮಿಕರು ದಾಳಿಯಲ್ಲಿ ಭಾಗವಹಿಸಿದ್ದು, ಸಾರ್ವಜನಿಕರು, ಉದ್ದಿಮೆದಾರರು, ವ್ಯಾಪಾರಿಯವರು ನಿಷೇಧಿತ ಪ್ಲಾಸ್ಟಿಕ್ಗಳನ್ನು ಉಪಯೋಗಿಸುವುದು ಕಂಡು ಬಂದಲ್ಲಿ ಉದ್ದಿಮೆ ಪರವಾನಿಗೆಯನ್ನು ರದ್ದುಪಡಿಸಿ, ದಂಡ ವಿಧಿಸಲಾಗುವುದು.
ಜುಲೈ ಮಾಹೆಯಲ್ಲಿ ಒಟ್ಟು ಈವರೆಗೆ 262 ಕೆ.ಜಿ ನಿಷೇಧಿತ ಪ್ಲಾಸ್ಟಿಕ್ಗಳನ್ನು ವಶಪಡಿಸಿಕೊಂಡು ರೂ. 54,500 ನ್ನು ದಂಡ ವಿಧಿಸಲಾಯಿತು ಹಾಗೂ ಉದ್ದಿಮೆಗಳಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ಗಳನ್ನು ಉಪಯೋಗಿಸದ ಉದ್ದಿಮೆಯನ್ನು ಹಸಿರು ಸಂಸ್ಥೆ ಎಂದು ಘೋಷಿಸಲಾಯಿತು. ಎಲ್ಲಾ ಉದ್ದಿಮೆದಾರರು ಏಕ ಬಳಕೆಯ ಪ್ಲಾಸ್ಟಿಕ್ಗಳನ್ನು ಉಪಯೋಗಿಸುವುದನ್ನು ತ್ಯಜಿಸಿ ಹಸಿರು ಸಂಸ್ಥೆ ಎಂದು ಘೋಷಿಸಿಕೊಳ್ಳುವಂತೆ ಪೌರಾಯುಕ್ತರು ಸೂಚಿಸಿರುತ್ತಾರೆ.
ನಗರಸಭಾ ವ್ಯಾಪ್ತಿಯಲ್ಲಿ ಸಾರ್ವಜನಿಕರು ಮನೆ, ಮದುವೆ, ಹಾಲ್, ಹೊಟೇಲ್ಗಳಲ್ಲಿ ಸಮಾರಂಭ ಮಾಡುವಾಗ ಹಾಗೂ ರಸ್ತೆ ಬದಿ ಟೀ, ಕಾಫಿ, ತಿಂಡಿ ಮಾರಾಟ ಮಾಡುವವರು ಕರ್ನಾಟಕ ಸರ್ಕಾರದ ನಿರ್ದೇಶನದಂತೆ ರೆಡ್ಯೂಸ್, ರೀಯೂಸ್ ಮತ್ತು ರೀಸೈಕಲ್ ಮಾದರಿಯಲ್ಲಿ ತ್ಯಾಜ್ಯ ವಸ್ತುಗಳನ್ನು ಕಡಿಮೆ ಮಾಡುವ ಹಿತ ದೃಷ್ಟಿಯಿಂದ ಪ್ರತಿಯೊಬ್ಬ ನಾಗರಿಕರು ಸಭೆ ಸಮಾರಂಭಗಳಲ್ಲಿ ಟೀ, ಕಾಫಿ, ತಿಂಡಿ, ಊಟಕ್ಕೆ ಬಳಸುವಾಗ ಮರುಬಳಕೆಯ ವಸ್ತುಗಳಾದ ಸ್ಟೀಲ್ ಲೋಟ, ಸ್ಟೀಲ್ ತಟ್ಟೆಗಳನ್ನು ಕಡ್ಡಾಯವಾಗಿ ಬಳಸಿ, ತ್ಯಾಜ್ಯವನ್ನು ಕಡಿಮೆ ಮಾಡಿ ಉಡುಪಿ ನಗರವನ್ನು ಕಸ ಮುಕ್ತ ನಗರವನ್ನಾಗಿ ಮಾಡುವುದು, ಸಾರ್ವಜನಿಕರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಹಾಗೂ ಪರಿಸರ ಸಂರಕ್ಷಣೆ ಮಾಡಲು ಸಾರ್ವಜನಿಕರು ನಗರಸಭೆಯೊಂದಿಗೆ ಕೈಜೋಡಿಸುವಂತೆ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.