ಪತ್ನಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ ತ್ರಿವಳಿ ತಲಾಖ್‌ ನೀಡಿದ ಪತಿ..!!

ಕಾಪು : ಮಲ್ಲಾರು ಕೋಟೆ ರಸ್ತೆಯ ಆಸ್ಮಾ ಭಾನು (37) ಅವರಿಗೆ ಪತಿ ಮೊಹಮ್ಮದ್‌ ಸಾದಿಕ್‌ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಾ ಬಂದಿದ್ದು, ಅದರ ಜತೆಗೆ ಬೇರೆ ಮದುವೆಯಾಗುವ ಉದ್ದೇಶದಿಂದ ತಲಾಖ್‌ ನೀಡಿರುವ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಲ್ಲಾರು ಕೋಟೆ ರಸ್ತೆಯ ಆಸ್ಮಾ ಭಾನು ಮತ್ತು ಮೊಹಮ್ಮದ್‌ ಸಾದಿಕ್‌ 2006ರಲ್ಲಿ ಮುಸ್ಲಿಂ ಶರಿಯತ್‌ ಪ್ರಕಾರ ವಿವಾಹವಾಗಿದ್ದು, ವಿವಾಹದ ಬಳಿಕ ಸಾದಿಕ್‌ ಪತ್ನಿಯೊಂದಿಗೆ ಸರಿಯಾಗಿ ಮಾತನಾಡದೆ ತವರು ಮನೆಗೆ ಹಾಗೂ ಅಲ್ಲಿನ ಕಾರ್ಯಕ್ರಮಗಳಿಗೆ ಹೋಗಲು ಬಿಡದೆ ನಿಂದಿಸುತ್ತಾ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದರು.

ವಿವಾಹವಾದ ಆರು ತಿಂಗಳ ಬಳಿಕ ಉದ್ಯೋಗದ ಬಗ್ಗೆ ವಿದೇಶಕ್ಕೆ ಹೋಗಿದ್ದು ಅಲ್ಲಿಂದಲೂ ಕರೆ ಮಾಡಿ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದರು. ಅಲ್ಲದೇ ಎರಡು ವರ್ಷದ ಬಳಿಕ ಉದ್ಯೋಗ ಕಳೆದುಕೊಂಡು ಊರಿಗೆ ಬಂದು ವ್ಯವಹಾರಕ್ಕೆಂದು ಆಸ್ಮಾ ಅವರ 22 ಪವನ್‌ ಚಿನ್ನವನ್ನು ಬ್ಯಾಂಕ್‌ನಲ್ಲಿಟ್ಟು ಹಣ ಪಡೆದುಕೊಂಡು, ಅನಂತರ ಚಿನ್ನವನ್ನು ಮರಳಿ ಕೇಳಿದಾಗ ನಿನಗೆ ತಲಾಖ್‌ ನೀಡುತ್ತೇನೆ, ನೀನು ಮನೆ ಬಿಟ್ಟು ಹೋಗದಿದ್ದರೆ ನಿನ್ನನ್ನು ಕೊಂದು ಬೇರೆ ವಿವಾಹವಾಗುತ್ತೇನೆಂದು ಹೆದರಿಸುತ್ತಿದ್ದುದಲ್ಲದೇ ಪತ್ನಿ ಮತ್ತು ಮಕ್ಕಳಿಗೆ ಒಂದಲ್ಲ ಒಂದು ಕಾರಣಕ್ಕೆ ಹಲ್ಲೆ ಮಾಡಿ ನಿಂದಿಸುತ್ತಿದ್ದರು. ಬುಧವಾರ ರಾತ್ರಿ ಮನೆಗೆ ಬಂದ ಸಾದಿಕ್‌ ಪತ್ನಿ ಆಸ್ಮಾ ಅವರನ್ನು ಅವಾಚ್ಯವಾಗಿ ನಿಂದಿಸಿ ಮನೆ ಬಿಟ್ಟು ಹೋಗುವಂತೆ, ಇಲ್ಲವಾದಲ್ಲಿ ನನಗೆ ಬೇರೆ ಮದುವೆಯಾಗಲು ಆಗುವುದಿಲ್ಲವೆಂದು ಹೇಳಿ ತ್ರಿವಳಿ ತಲಾಖ್‌ನೀಡಿದ್ದಾರೆಂದು ಕಾಪು ಪೊಲೀಸ್‌ ಠಾಣೆಗೆ ನೀಡಿರುವ ದೂರಿನಲ್ಲಿ ಹೇಳಲಾಗಿದೆ.

You cannot copy content from Baravanige News

Scroll to Top