ನವದೆಹಲಿ, ಆ.08: ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತು ರಾಜ್ಯ ಪೊಲೀಸರು ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ನಡೆಸುತ್ತಿರುವ ತನಿಖೆಯ ಪರಿಶೀಲನೆಗಾಗಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ ನೇತೃತ್ವದ ತ್ರಿಸದಸ್ಯ ಪೀಠವನ್ನು ಸುಪ್ರೀಂ ಕೋರ್ಟ್ ಇಂದು ರಚಿಸಿದೆ.
ಮಣಿಪುರದ ಹಿಂಸಾಚಾರದ ಕುರಿತಾದ ತನಿಖೆಯ ಪರಿಶೀಲನೆ, ಪರಿಹಾರ ಕ್ರಮ, ಪುನರ್ವಸತಿ ಮುಂತಾದ ವಿಷಯಗಳ ಕುರಿತಾದ ವಿಶಾಲ ಕಾರ್ಯನಿರ್ವಹಣಾ ವ್ಯಾಪ್ತಿಯನ್ನು ಈ ಸಮಿತಿ ಹೊಂದಿರಲಿದೆ.
ನಿವೃತ್ತ ನ್ಯಾಯಮೂರ್ತಿಗಳಾದ ಶಾಲಿನಿ ಜೋಶಿ ಮತ್ತು ಆಶಾ ಮೆನನ್ ಸಮಿತಿಯ ಇತರ ಸದಸ್ಯರು. ಸಮಿತಿಯನ್ನು ಸಿಬಿಐಗೆ ಪರ್ಯಾಯವಾಗಿ ರಚಿಸಿಲ್ಲ, ಬದಲಿಗೆ ಕಾನೂನಾತ್ಮಕ ಆಡಳಿತದಲ್ಲಿ ವಿಶ್ವಾಸವನ್ನು ಉಳಿಸುವ ಸಲುವಾಗಿ ನಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಏನೆಲ್ಲ ಇದೆಯೋ ಅದೆಲ್ಲವನ್ನೂ ಮಾಡುವ ವಿಸ್ತಾರ ಉದ್ದೇಶದಿಂದ ರಚಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಸ್ಪಷ್ಟಪಡಿಸಿದೆ.
ಆದರೆ ಪ್ರಕರಣಗಳ ವಿಚಾರಣೆಯನ್ನು ಮಣಿಪುರ ಹೊರತಾದ ರಾಜ್ಯಕ್ಕೆ ವರ್ಗಾಯಿಸಲು ನ್ಯಾಯಾಲಯ ನಿರಾಕರಿಸಿದೆ.