ಅಪ್ರಾಪ್ತೆಯರ ಅತ್ಯಾಚಾರಕ್ಕೆ ಗಲ್ಲುಶಿಕ್ಷೆ, ಗ್ಯಾಂಗ್‌ ರೇಪ್‌ಗೆ 20 ವರ್ಷ ಜೈಲು – ಲೋಕಸಭೆಯಲ್ಲಿ 3 ಮಸೂದೆ ಮಂಡಿಸಿದ ಅಮಿತ್‌ ಶಾ

ದೇಶದ್ರೋಹ ಸೆಕ್ಷನ್ ರದ್ದು ಮಾಡುತ್ತೇವೆ ಎಂದು ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾಹಿತಿ ನೀಡಿದ್ದಾರೆ. ಇವತ್ತಿನ ಲೋಕಸಭೆ ಕಲಾಪದಲ್ಲಿ ಗೃಹ ಸಚಿವರು, ದೇಶದ ಕ್ರಿಮಿನಲ್ ಕಾನೂನಿಗೆ ತಿದ್ದುಪಡಿ ತರುವ ಕುರಿತು ಪ್ರಸ್ತಾಪ ಮಾಡಿ, ಮೂರು ಮಸೂದೆಗಳನ್ನು ಮಂಡಿಸಿದರು.

ನೂತನ ಮಸೂದೆಗಳು ಯಾವ್ಯಾವವು..?

ಇಂಡಿಯನ್ ಪಿನಲ್ ಕೋಡ್ (IPC) ಬದಲಿಗೆ ‘ಭಾರತೀಯ ನ್ಯಾಯ ಸಂಹಿತಾ’ ಮಸೂದೆ
ಕ್ರಿಮಿನಲ್ ಪ್ರೊಸಿಜರ್ (CrPC) ಬದಲಿಗೆ ‘ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ’ ಮಸೂದೆ
ಇಂಡಿಯನ್ ಎವಿಡೆನ್ಸ್ ಆ್ಯಕ್ಟ್ (IEA) ಬದಲಿಗೆ ‘ಭಾರತೀಯ ಸಾಕ್ಷ್ಯ’ ಮಸೂದೆ
ಅಪ್ರಾಪ್ತರ ರೇಪ್ ಆರೋಪಿಗಳಿಗೆ ಮರಣದಂಡನೆ

ದೇಶದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲು ನಿರ್ಧಾರ ಮಾಡಿದ್ದೇವೆ. ಐಪಿಸಿ ಸೆಕ್ಷನ್ 1860 ರಲ್ಲಿ ಜಾರಿಗೆ ತರಲಾಗಿತ್ತು. ಕ್ರಿಮಿನಲ್ ಪ್ರೊಸಿಜರ್ ಕೋಡ್ ಅನ್ನು 1898 ರಲ್ಲಿ ಜಾರಿಗೆ ತಂದಿದ್ದರು. ಎವಿಡೆನ್ಸ್ ಆ್ಯಕ್ಟ್ ಅನ್ನು 1872ರಲ್ಲಿ ಜಾರಿಗೆ ತರಲಾಗಿತ್ತು. ಇವೆಲ್ಲವನ್ನೂ ಬ್ರಿಟಿಷರು ಜಾರಿಗೆ ತಂದಿದ್ದರು ಎಂದು ಅಮಿತ್ ಶಾ ಹೇಳಿದರು.

ಗುಂಪು ಹಲ್ಲೆ‌ ಅಪರಾಧಿಗಳಿಗೆ ಮರಣದಂಡನೆ

ಗುಂಪು ಹಲ್ಲೆ‌ ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸುವ ಅವಕಾಶವನ್ನೂ ತರಲಾಗುತ್ತಿದೆ. ಗ್ಯಾಂಗ್ ರೇಪ್ ಪ್ರಕರಣಗಳಲ್ಲಿ ಆರೋಪಿಗಳಿಗೆ 20 ವರ್ಷದಿಂದ ಜೀವಾವಧಿ ಶಿಕ್ಷೆ ಹಾಗೂ ಅಪ್ರಾಪ್ತರ ರೇಪ್ ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ನೀಡಲಾಗುತ್ತದೆ ಎಂದು ಅಮಿತ್ ಶಾ ಹೇಳಿದ್ದಾರೆ.

ಸುಪ್ರೀಂ ಅಂಗಳದಲ್ಲಿ ದೇಶದ್ರೋಹ ಕಾಯ್ದೆ

ಇದೇ ಸಂದರ್ಭದಲ್ಲಿ ದೇಶದ್ರೋಹದ ಕಾಯಿದೆ ರದ್ದು ಮಾಡುವ ಬಗ್ಗೆಯೂ ಅಮಿತ್ ಶಾ ಪ್ರಸ್ತಾಪಿಸಿದ್ದಾರೆ. ದೇಶದ್ರೋಹದ ಕಾಯಿದೆ ಕೂಡ ಬ್ರಿಟಿಷ್ ಕಾಲದ್ದಾಗಿದೆ. ಐಪಿಸಿ ಸೆಕ್ಷನ್ 124 (a) ಅಡಿ ದೇಶದ್ರೋಹದ ಆರೋಪ ಹೊರಿಸಿ ಶಿಕ್ಷೆ ವಿಧಿಸಲಾಗುತ್ತಿತ್ತು. ಇದು‌ ಬಾರಿ ಟೀಕೆ, ಚರ್ಚೆಗೆ ಗುರಿಯಾಗಿತ್ತು.

ಸೆಕ್ಷನ್ 150 ಸೇರ್ಪಡೆ

ಹೊಸ ಭಾರತೀಯ ನ್ಯಾಯ ಸಂಹಿತೆಯಲ್ಲಿ ಸೆಕ್ಷನ್ 150 ಸೇರ್ಪಡೆ ಮಾಡಲಾಗುತ್ತದೆ. ಸೆಕ್ಷನ್ 150ರಡಿ ದೇಶದ ಸಾರ್ವಭೌಮತ್ವ, ಐಕ್ಯತೆ, ಸಮಗ್ರತೆಗೆ ದಕ್ಕೆ ತಂದರೆ ಶಿಕ್ಷೆ ನೀಡಲಾಗುತ್ತದೆ. ಈ ಹಿಂದಿನ ಐಪಿಸಿ 124(a) ಬದಲು ಹೊಸ ಸೆಕ್ಷನ್ 150 ರಡಿ ಅದೇ ಅಪರಾಧಗಳಿಗೆ ಶಿಕ್ಷೆ ನೀಡಲಾಗುವುದು. ಪ್ರತ್ಯೇಕ ಚಟುವಟಿಕೆ ನಡೆಸಿದರೆ ದೇಶದ ಸಾರ್ವಭೌಮತ್ವಕ್ಕೆ ದಕ್ಕೆ ತಂದರೇ ಜೀವಾವಧಿ ಶಿಕ್ಷೆ ನೀಡಲಾಗುವುದು. ಹೀಗಾಗಿ ಬೇರೆ, ಬೇರೆ ರೂಪದಲ್ಲಿ ದೇಶದ್ರೋಹದ ಕಾನೂನು ಮುಂದುವರಿಯಲಿದೆ. ಸರ್ಕಾರದ ಕ್ರಮಗಳನ್ನು ಟೀಕಿಸಿದರೂ ಸೆಕ್ಷನ್ 150 ರಡಿ ಕೇಸ್ ದಾಖಲು ಮಾಡಲಾಗುತ್ತದೆ.

Scroll to Top