ಉಡುಪಿ: ‘ಕಾಲೇಜು ವಿಡಿಯೋ ಪ್ರಕರಣದ ತನಿಖೆಯಲ್ಲಿ ಸರ್ಕಾರ, ಪೊಲೀಸ್ ಇಲಾಖೆ ಅಲರ್ಟ್ ಆಗಿದೆ’ – ಲಕ್ಷ್ಮಿ ಹೆಬ್ಬಾಳ್ಕರ್

ಉಡುಪಿ, ಆ 14: ಕಾಲೇಜು ವಿಡಿಯೋ ಪ್ರಕರಣದ ಸಿಐಡಿ ತನಿಖೆ ಯಾವ ಹಂತದಲ್ಲಿದೆ ಎಂದು ಹೇಳಲು ಆಗಲ್ಲ. ಈ ವಿಚಾರದಲ್ಲಿ ಸರ್ಕಾರ, ಮುಖ್ಯಮಂತ್ರಿಗಳು, ಪೊಲೀಸ್ ಇಲಾಖೆ 24 ಗಂಟೆ ಅಲರ್ಟ್ ಆಗಿದೆ. ಹೆಚ್ಚಿನ ತನಿಖೆಗೆ ಬೇಡಿಕೆ ಇತ್ತು, ಹಾಗಾಗಿ ಮುಖ್ಯಮಂತ್ರಿಗಳು ಸಿಐಡಿಗೆ ಕೊಟ್ಟಿದ್ದಾರೆ. ಸಿಐಡಿ ತಂಡ ಕಾಲೇಜಿಗೆ ಭೇಟಿ ಕೊಟ್ಟಿದೆ, ಸಂತ್ರಸ್ತೆಯ ಜೊತೆ ಮಾತುಕತೆ ನಡೆಸಿದೆ. ತನಿಖೆ ಪ್ರಗತಿಯಲ್ಲಿದೆ. ಎಲ್ಲಿಯವರೆಗೆ ಬಂದಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.


ಸಿಐಡಿ ತನಿಖೆ ಬಗ್ಗೆ ವಿಶ್ವಾಸವಿಲ್ಲ ಎಂದಿರುವ ಶಾಸಕ ಯಶ್ ಪಾಲ್ ಸುವರ್ಣ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಯಶ್ಪಾಲ್ ಸುವರ್ಣ ನನ್ನ ಸಹೋದರರು, ವಿರೋಧ ಪಕ್ಷದಲ್ಲಿದ್ದಾರೆ. ಅವರು ಮಾತನಾಡಬೇಕಾಗುತ್ತದೆ ಆ ಕಾರಣಕ್ಕೆ ಮಾತನಾಡುತ್ತಾರೆ. ನಾವು ಮಹಿಳೆಯರಿಗೆ ಮರ್ಯಾದೆ ಕೊಡುವ ಸರಕಾರ. ಯಾವುದೇ ಸಮಾಜ, ಯಾರಿಗೆ ಅನ್ಯಾಯವಾದರೂ ನಾವು ಸಹಿಸಲ್ಲ. ನಿಷ್ಪಕ್ಷಪಾತವಾದ ತನಿಖೆ ಮಾಡುತ್ತೇವೆ ಎಂದರು.

ಉಡುಪಿಯ ಮಣಿಪಾಲ ಪಬ್ ಗಳಲ್ಲಿ ಅಬಕಾರಿ ಕಾರ್ಯಾಚರಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪಬ್ ಹೋಟೆಲ್ ರೈಡ್ ಆದರೆ ಬಿಜೆಪಿಗೆ ಏನು ಸಂಬಂಧ. ಬಿಜೆಪಿಯವರು ಹೇಗೆ ಟಾರ್ಗೆಟ್ ಆಗ್ತಾರೆ ಬಿಡಿಸಿ ಹೇಳಿ. ಕಾಂಗ್ರೆಸ್ ಯಾರನ್ನು ಟಾರ್ಗೆಟ್ ಮಾಡಲ್ಲ. ಕಾನೂನು ಚೌಕಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ. ಲೈಸನ್ಸ್ ತೆಗೆದುಕೊಂಡು ಕ್ಲಬ್ ಪಬ್ ನಡೆಸುತ್ತಾರೆ. ಎಲ್ಲದಕ್ಕೂ ಒಂದು ನಿಯಮ ಇರುತ್ತದೆ, ಸಮಯ ನಿಗದಿಯಾಗಿರುತ್ತದೆ. ಕಾನೂನು ಚೌಕಟ್ಟಿನಲ್ಲಿ ಮಾಡಿದರೆ ಯಾರೂ ವಿರೋಧ ಮಾಡುವುದಿಲ್ಲ. ಕಾಂಗ್ರೆಸ್ಸಿಗೆ ಯಾರನ್ನು ಟಾರ್ಗೆಟ್ ಮಾಡುವ ಅನಿವಾರ್ಯ ಸ್ಥಿತಿಯಿಲ್ಲ ಎಂದಿದ್ದಾರೆ.

ಕಮಿಷನ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಳೆದ ಮೂರು ತಿಂಗಳಲ್ಲಿ ನಮ್ಮ ಸರ್ಕಾರ ಯಾವುದೇ ಹೊಸ ಯೋಜನೆ ಮಾಡಿಲ್ಲ. ಹೊಸ ಯೋಜನೆಗಳನ್ನು ಮಾಡಿದರೆ ಮಾತ್ರ ಕಮಿಷನ್ ವಿಚಾರ ಬರುತ್ತದೆ. ಹೊಸ ಗುದ್ದಲಿ ಪೂಜೆ ಟೆಂಡರ್ ಆದರೆ ಕಮಿಷನ್ ವಿಚಾರ ಬರುತ್ತದೆ. ಆನ್ ಗೋಯಿಂಗ್ ಕಾಮಗಾರಿಗಳು ನಡೆಯುತ್ತಿರುವಾಗ ಕಮಿಷನ್ ವಿಚಾರ ಎಲ್ಲಿಂದ ಬರುತ್ತದೆ. ನಾವು ಕಮಿಷನ್ ಕೇಳಿರುವ ಯಾವುದೇ ಪ್ರಕರಣಗಳು ಇಲ್ಲ. ಬಿಬಿಎಂಪಿ ವಿಚಾರದಲ್ಲಿ ಬಂದಿರುವ ಆರೋಪ ಬಗ್ಗೆ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದೆ. ಬೋಗಸ್ ಬಿಲ್ ಆಗಿದೆಯಾ ಎಂದು ತನಿಖಾ ತಂಡ ವಿಚಾರಣೆ ಮಾಡುತ್ತದೆ. ಒಂದು ಕಿಲೋಮೀಟರ್ ಕೆಲಸಕ್ಕೆ 10 ಕಿ.ಮೀ ಎಂದು ಬಿಲ್ ಕೊಟ್ಟಿದ್ದಾರೆ. ಕೇವಲ 24 ಗಂಟೆಯಲ್ಲಿ ಸ್ಯಾಂಕ್ಷನ್ ಆಗುತ್ತದೆ ಕೆಲಸವೂ ಮುಗಿಯುತ್ತದೆ ಇದು ಸಾಧ್ಯನಾ..!? ಎಂದು ಪ್ರಶ್ನಿಸಿದ್ದಾರೆ.

ಇನ್ನು ಕೆಂಪಣ್ಣ ಮಾಡಿದ ಬೆಂಕಿಯಿಂದ ಬಾಣಲೆ ಆರೋಪವನ್ನು ನಾನು ಕೇಳಿಲ್ಲ. ಎಲ್ಲೂ ಕಮಿಷನ್ ದಂದೆ ಇಲ್ಲ ಎಂದು ಕೆಂಪಣ್ಣ ಸುದ್ದಿಗೋಷ್ಠಿಯಲ್ಲಿ ಹೇಳಿದ್ದನ್ನು ಕೇಳಿದ್ದೇನೆ. ಬಿಜೆಪಿ ಸಾಲ ಮಾಡಿ ಹೋಗಿದೆ ಬೊಕ್ಕಸದ ಸ್ಥಿತಿ ಎಲ್ಲರಿಗೂ ಗೊತ್ತಿದೆ. ಸಿಎಂ ಸಿದ್ದರಾಮಯ್ಯ ಅವರನ್ನು ಫೈನಾನ್ಸ್ ಎಕ್ಸ್ ಪರ್ಟ್ ಎಂದು ನಾವು ಕರೆಯುತ್ತೇವೆ. ಯಾರಿಗೂ ಹೊರೆಯಾಗದಂತೆ ಐದು ಗ್ಯಾರಂಟಿಗಳನ್ನು ಕೊಡುತ್ತೇವೆ ನಾಲ್ಕು ವರ್ಷದ ಬಾಕಿ ಬಿಲ್ ಒಂದೇ ಸಾರಿ ಕೊಡುವುದು ಹೇಗೆ? ಎಂದಿದ್ದಾರೆ.

ಮೊದಲ ಬಾರಿ ಸ್ವಾತಂತ್ರೋತ್ಸವದ ಧ್ವಜಾರೋಹಣಕ್ಕೆ ಬಂದಿದ್ದು, ಭಾರಿ ಚರ್ಚೆಯಲ್ಲಿರುವ ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣದ ಕುರಿತು ನಾನು ನಾಳೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

You cannot copy content from Baravanige News

Scroll to Top