ಮಂಗಳೂರು : ಮಗ ಆತ್ಮಹತ್ಯೆ ಮಾಡಿಕೊಂಡ 32 ದಿನಗಳ ಬಳಿಕ ತಂದೆಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಳ್ಳಾಲದಲ್ಲಿ ನಡೆದಿದೆ. ಮೃತರನ್ನು ಆತ್ಮಹತ್ಯೆ ಮಾಡಿಕೊಂಡ ಕೇರಳ ಕುಂಬಳೆ ಬಳಿಯ ಬಂಬ್ರಾಣ ಕಲ್ಕುಲ ನಿವಾಸಿ ಕಲ್ಲಿನ ಮೇಸ್ತ್ರಿ ಕೆಲಸ ಮಾಡುತ್ತಿದ್ದ ಲೋಕೇಶ್ (52) ಎಂದು ಗುರುತಿಸಲಾಗಿದ್ದು ಅವರ ಮೃತದೇಹ ಸೋಮವಾರ ಬೆಳಿಗ್ಗೆ ಉಳ್ಳಾಲ ಕಡಲ ಕಿನಾರೆಯಲ್ಲಿ ಪತ್ತೆಯಾಗಿದೆ.
ಪುತ್ರ ರಾಜೇಶ್ (26) ಕಳೆದ ಜುಲೈ 10 ರಂದು ನಾಪತ್ತೆಯಾಗಿದ್ದ, ಎರಡು ದಿನಗಳ ಬಳಿಕ ರಾಜೇಶ್ ನ ಮೃತದೇಹ ಮಂಗಳೂರು ಬೆಂಗರೆ ನೇತ್ರಾವತಿ ನದಿ ತೀರದಲ್ಲಿ ಪತ್ತೆಯಾಗಿತ್ತು. ಮಗನ ಅಂತ್ಯಕ್ರಿಯೆ ಕಳೆದ ಬಳಿಕ ತಂದೆ ಲೋಕೇಶ್ ನೊಂದುಕೊಂಡಿದ್ದು, ಅಲ್ಲದೆ ಮಗನ ಸಾವಿನ ಬಳಿಕ ಮಾನಸಿಕವಾಗಿ, ಕುಗ್ಗಿ ಹೋಗಿದ್ದರು. ಅಗಸ್ಟ್ 13 ರಂದು ಬೆಳಗ್ಗೆ 9.00 ಗಂಟೆಯ ವೇಳೆ ಪರಿಸರದ ಕೆಲವು ಮಂದಿಗೆ ಲೋಕೇಶ್ ರವರು ಮೊಬೈಲ್ ಮೂಲಕ ವಾಟ್ಸಪ್ ಸಂದೇಶ ಕಳುಹಿಸಿ “ನಾನು ಈಗ ಸೋಮೇಶ್ವರಕ್ಕೆ ಹೋಗಿ ಸಮುದ್ರಕ್ಕೆ ಹಾರುತ್ತೇನೆ.
ನನ್ನ ಹೆಣ ಉಳ್ಳಾಲದಲ್ಲಿ ಸಿಗಬಹುದು” ನಾನು ಮೊಬೈಲ್ ಕೊಂಡು ಹೋಗುವುದಿಲ್ಲ ಮನೆಯಲ್ಲಿ ಇಟ್ಟು ಹೋಗ್ತೇನೆ ಎಂದು ಹೇಳಿ ಮನೆಯಿಂದ ತೆರಳಿದ್ದರು. ವಾಟ್ಸಪ್ ಸಂದೇಶ ಕೇಳಿದ ಕೂಡಲೇ ಪರಿಸರದವರು ಕರೆ ಮಾಡಿದಾಗ ಮನೆ ಮಂದಿ ಕಾಲ್ ರಿಸೀವ್ ಮಾಡಿದ್ದರು. ಕೂಡಲೇ ಈ ವಿಷಯವನ್ನು ಉಳ್ಳಾಲ ಠಾಣೆಗೆ ಮನೆಯವರು ಹಾಗೂ ಪರಿಸರ ನಿವಾಸಿಗಳು ತಿಳಿಸಿದ್ದರು. ಸೋಮವಾರ ಲೋಕೇಶ್ ರ ಮೃತದೇಹ ಉಳ್ಳಾಲದಲ್ಲಿ ಮೀನುಗಾರರಿಗೆ ಸಿಕ್ಕಿದೆ. ರಾಜೇಶ್ ರವರ ಸಾವಿನ ಬಳಿಕ ಕೇವಲ 33 ದಿನದಲ್ಲಿ ತಂದೆ ಲೋಕೇಶ್ ರ ಸಾವು ಇದೀಗ ಮನೆಯವರಿಗೆ ಹಾಗೂ ಪರಿಸರ ಪ್ರದೇಶದಲ್ಲಿ ಶೋಕಸಾಗರವನ್ನುಂಟುಮಾಡಿದೆ. ಪ್ರಕರಣ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.