ಇಂದು ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ರಾಜ್ಯದ ಹಲವು ಕಡೆಗಳಲ್ಲಿ ದಾಳಿ ನಡೆಸಿದ್ದು, ಆಸ್ತಿ ಮೀರಿ ಆದಾಯ ಗಳಿಸಿದ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ 18ಕ್ಕೂ ಅಧಿಕ ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದು, ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.
ಬೆಂಗಳೂರು, ಚಿತ್ರದುರ್ಗ, ದಾವಣಗೆರೆ, ಮಡಿಕೇರಿ, ಬೀದರ್ ಸೇರಿದಂತೆ ಹಲವಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಚಿತ್ರದುರ್ಗ ಜಿಲ್ಲೆಯ ಹೊಳಲ್ಕರೆ ಸಣ್ಣ ನೀರಾವರಿ ಅಧಿಕಾರಿಯ ಮನೆ ಮೇಲೆ ದಾಳಿ ನಡೆಸಲಾಗಿದ್ದು, ದಾಖಲೆ ಪರಿಶೀಲನೆ ನಡೆಸಲಾಗುತ್ತಿದೆ.
ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಬೀದರ್ ಜಿಲ್ಲೆಯ ಹುಮ್ನಾಬಾದ್ ಪಟ್ಟಣದ ಟೀಚರ್ ಕಾಲೋನಿಯ ಕಾನ್ಸ್ಟೇಬಲ್ ವಿಜಯಕುಮಾರ್ ಮನೆ ಮೇಲೂ ಲೋಕಾಯುಕ್ತ ದಾಳಿ ಮಾಡಲಾಗಿದೆ. ಚಿಟಗುಪ್ಪ ಠಾಣೆಯಲ್ಲಿ ವಿಜಯಕುಮಾರ್ ಕರ್ತವ್ಯ ನಿರ್ವಹಿಸುತ್ತಿದ್ದರು.
ಅಕ್ರಮ ಆಸ್ತಿ ಸಂಪಾದನೆ ದೂರು ಹಿನ್ನೆಲೆ ಚಿತ್ರದುರ್ಗದ ಹೊಳಲ್ಕೆರೆ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಕೆ.ಮಹೇಶ್, ಪತ್ನಿ BBMP ಎಇ ಹೆಚ್.ಭಾರತಿ ಮನೆ ಮೇಲೆ ಲೋಕಾಯುಕ್ತ ಎಸ್ಪಿ ವಾಸುದೇವರಾಮ್, ಡಿವೈಎಸ್ಪಿ ಮೃತ್ಯುಂಜಯ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಮಡಿಕೇರಿಯಲ್ಲೂ ಲೋಕಾಯುಕ್ತ ದಾಳಿಯಾಗಿದ್ದು, ಕೊಡಗು ಅಪರ ಜಿಲ್ಲಾಧಿಕಾರಿ ನಂಜುಡೇಗೌಡ ಹಾಗೂ ಬಿಬಿಎಂಪಿ ಎಇ ಭಾರತಿ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ದಾವಣಗೆರೆಯಲ್ಲಿರುವ ಕೆ.ಮಹೇಶ್, ಕೆ.ಭಾರತಿ ದಂಪತಿ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ಅಟ್ಯಾಕ್ ಮಾಡಿದ್ದು, ದಾಳಿಯ ವೇಳೆ 15 ಲಕ್ಷ ರೂ.ಗಿಂತಲೂ ಅಧಿಕ ನಗದು, 1 ಕೆಜಿಗೂ ಅಧಿಕ ಚಿನ್ನಾಭರಣ ಪತ್ತೆಯಾಗಿದೆ.
ಈ ಹಿಂದೆ ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತೆ ಹಾಗೂ ಪಿಆರ್‌ಇಡಿ ಇಲಾಖೆಯಲ್ಲಿ ಕೆಲಸಮಾಡಿದ್ದ ಕೆ.ಭಾರತಿ ಮಹೇಶ್ ಮನೆ ಮೇಲೆ ಚಿತ್ರದುರ್ಗ ಲೋಕಾಯುಕ್ತ ಎಸ್ಪಿ ವಾಸುದೇವರಾವ್ ನೇತೃತ್ವದಲ್ಲಿ ದಾಳಿ ನಡೆದಿದೆ.