ಶಾಲೆಗೆ ಅನಧಿಕೃತ ಗೈರು – ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ಸಹಿತ ಇಬ್ಬರು ಶಿಕ್ಷಕರ ಅಮಾನತು

ಕುಂದಾಪುರ : ಮೇಲಾಧಿಕಾರಿಗಳ ಅನುಮತಿ ಪಡೆಯದೆ ಅನಧಿಕೃತವಾಗಿ ನಿರಂತರ ಶಾಲೆಗೆ ಗೈರಾಗಿರುವ ಕಾರಣಕ್ಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆನಗಳ್ಳಿ ಇಲ್ಲಿಯ ಸಹಶಿಕ್ಷಕ ಹಾಗೂ ಉಡುಪಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಂಪಾರು ದಿನಕರ ಶೆಟ್ಟಿ ಹಾಗೂ ಗೈರಾಗಿರುವ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡದೆ ಶಿಕ್ಷಕ ದಿನಕರ ಶೆಟ್ಟಿಗೆ ಬೆಂಬಲ ನೀಡಿದ ಕಾರಣಕ್ಕೆ ಮುಖ್ಯೋಪಾಧ್ಯಾಯ ಜನಾರ್ದನ ಪಟಗಾರ್ ಅವರನ್ನು ಅಮಾನತುಗೊಳಿಸಿ ಉಡುಪಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಣಪತಿ ಆದೇಶ ಹೊರಡಿಸಿದ್ದಾರೆ.

ಶಿಕ್ಷಕ ಅಂಪಾರು ದಿನಕರ ಶೆಟ್ಟಿ ಶಾಲೆಗೆ ಬರುತ್ತಿಲ್ಲ ಮತ್ತು ಇದರಿಂದ ಶಾಲೆಯ ವಿದ್ಯಾರ್ಥಿಗಳು ಶಿಕ್ಷಣ ವಂಚಿತರಾಗುತ್ತಿದ್ದಾರೆ ಎಂದು ಸ್ಥಳೀಯರು ಶಿಕ್ಷಣ ಇಲಾಖೆಗೆ ದೂರು ನೀಡಿದ್ದರು. ದೂರಿನ ಆಧಾರದ‌ ಮೇಲೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಭೇಟ ನೀಡಿದಾಗ ಶಿಕ್ಷಕ ಶಾಲೆಯಲ್ಲಿ ಇರದೇ, ಹಾಜರಿಯನ್ನೂ ಹಾಕದೇ, ಮೇಲಧಿಕಾರೊಗಳ ಗಮನಕ್ಕೂ ತಾರದೇ ಗೈರಾಗಿರುವುದು ಕಂಡು ಬಂದಿತ್ತು ಎನ್ನಲಾಗಿದೆ.

ಮುಖ್ಯೋಪಾದ್ಯಾಯ ಜನಾರ್ದನ ಪಟಗಾರ್ ಅನಧಿಕೃತ ಗೈರಿನ ಬಗ್ಗೆ ಮಾಹಿತಿಯನ್ನೂ ನೀಡಿಲ್ಲ ಎಂದು ಆರೋಪಿಸಲಾಗಿದೆ. ಇದೀಗ ಇಬ್ಬರು ಶಿಕ್ಷಕರು ಅಮಾನತ್ತಾಗಿದ್ದು ಇಲಾಖಾ ವಿಚಾರಣೆ ಎದುರಿಸಬೇಕಾಗಿದೆ.

Scroll to Top