ವಿಜಯನಗರ: ಮದುವೆಯಾಗುವುದಾಗಿ ಹಲವಾರು ಯುವಕರನ್ನು ನಂಬಿಸಿ ಅವರಿಂದಲೇ ಹಣ ಪಡೆದು ವಂಚಿಸಿರುವ ಮಹಿಳೆಯನ್ನು ಹೊಸಕೋಟೆ ಪೊಲೀಸರು ಉಡುಪಿಯಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.
ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ವಾಸವಿದ್ದ ತಬಸ್ಸುಮ್ ಬಂಧಿತ ಮಹಿಳೆಯಾಗಿದ್ದಾಳೆ.
ಹೊಸಕೋಟೆ ತಾಲೂಕಿನಲ್ಲಿ ಯುವಕರನ್ನು ವಂಚಿಸಿ ಹಣ ದೋಖಾ ಮಾಡಿರುವ ಪ್ರಕರಣದಲ್ಲಿ ಕೋರ್ಟ್ ನಿರ್ದೇಶನದಂತೆ ತಬಸ್ಸುಮ್ ಮೇಲೆ ಹೊಸಕೋಟೆ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿ ಮಹಿಳೆಯ ಜಾಡು ಹಿಡಿದು ಉಡುಪಿಗೆ ಆಗಮಿಸಿ ವಶಕ್ಕೆ ಪಡೆದಿದ್ದಾರೆ.
ತಬಸ್ಸುಮ್ ಮೇಲೆ ಮದುವೆಯಾಗುವುದಾಗಿ ನಂಬಿಸಿ ಯುವಕರಿಂದ ಹಣ ಪಡೆಯುವುದು, ಬ್ಯಾಂಕ್ ಲೋನ್ ಮಾಡಿಸುವುದಾಗಿ ಹೇಳಿ ವಂಚಿಸುವುದು, ಸರಕಾರಿ ಕೆಲಸ ತೆಗೆಸಿಕೊಡುತ್ತೇನೆಂದು ಹೇಳಿ ವಂಚನೆ ಮಾಡಿರುವುದು, ಅಲ್ಪಸಂಖ್ಯಾತ ಇಲಾಖೆಯ ಯೋಜನೆಯಡಿ ಆಟೋ, ಆಂಬುಲೆನ್ಸ್ ಕೊಡಿಸುವುದಾಗಿ ಹೇಳಿ ಹಣ ಪಡೆದು ವಂಚಿಸಿದ್ದು ಇತ್ಯಾದಿ ಹಲವಾರು ರೀತಿಯ ದೂರುಗಳು ಬಂದಿವೆ.
ಈ ಹಿನ್ನೆಲೆಯಲ್ಲಿ ಈಕೆಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವಿಜಯನಗರ ಎಸ್ಪಿ ಶ್ರೀಹರಿ ಬಾಬು ತಿಳಿಸಿದ್ದಾರೆ.
ಮದುವೆಯಾಗುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚನೆ : ಉಡುಪಿಯಲ್ಲಿ ಮಹಿಳೆಯ ಬಂಧನ..!!
