ಬಂಟಕಲ್ಲು ಪರಿಸರದಲ್ಲಿ ಹುಚ್ಚು ನಾಯಿ ಹಾವಳಿ : ಇಬ್ಬರಿಗೆ ಗಾಯ

ಶಿರ್ವ : ಬಂಟಕಲ್ಲು ಪರಿಸರದಲ್ಲಿ ಕಳೆದ ಕೆಲವು ದಿನಗಳಿಂದ ಹುಚ್ಚು ನಾಯಿಯ ಹಾವಳಿ ವಿಪರೀತವಾಗಿದ್ದು, ಬಂಟಕಲ್ಲು ದೇವಸ್ಥಾನದ ಬಳಿ ಇಬ್ಬರು ನಾಗರಿಕರಿಗೆ ಕಚ್ಚಿ ಗಾಯಗೊಳಿಸಿದೆ.

ನಾಗರೀಕರು ತಮ್ಮ ಮನೆಯ ಸಾಕು ನಾಯಿಗಳನ್ನು ಕಟ್ಟಿ ಹಾಕಿ ಹುಚ್ಚು ನಾಯಿಗಳ ಬಗ್ಗೆ ಎಚ್ಚರದಿಂದಿರುವಂತೆ ಬಂಟಕಲ್ಲು ನಾಗರಿಕ ಸಮಿತಿಯ ಅಧ್ಯಕ್ಷ ಕೆ.ಆರ್‌. ಪಾಟ್ಕರ್‌ ತಿಳಿಸಿದ್ದಾರೆ.

ಶನಿವಾರ ಮುಂಜಾನೆ ಕಪ್ಪು ಬಿಳಿ ಬಣ್ಣದ ಕುತ್ತಿಗೆಯಲ್ಲಿ ಬೆಲ್ಟ್ ಇರುವ ಹುಚ್ಚು ನಾಯಿಯೊಂದು ಅರಸೀಕಟ್ಟೆ ಮುಖ್ಯ ರಸ್ತೆಯಿಂದ ರಸ್ತೆ ಬದಿಯಿರುವ ಸುಮಾರು 25 ನಾಯಿಗಳಿಗೆ ಕಚ್ಚಿಕೊಂಡು ಗಾಯಗೊಳಿಸುತ್ತಾ ಶಿರ್ವ ಮಂಚಕಲ್‌ನತ್ತ ಸಾಗಿದೆ. ಇನ್ನು 10-15 ದಿನಗಳಲ್ಲಿ ಆ ನಾಯಿಗಳಿಗೂ ರೇಬಿಸ್‌ಕಾಯಿಲೆ ತಗಲುವ ಸಂಭವವಿದ್ದು, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ತೆರಳುವಾಗ ಜಾಗರೂಕರಾಗಿರಬೇಕೆಂದು ಕೆ.ಆರ್‌.ಪಾಟ್ಕರ್‌ ವಿನಂತಿಸಿದ್ದಾರೆ.

ಕೆಲ ಸಂಘ ಸಂಸ್ಥೆಗಳ ನೆರವಿನೊಂದಿಗೆ ಪಶುವೈದ್ಯ ಡಾ| ಅರುಣ್‌ ಹೆಗ್ಡೆ ನೆೇತೃತ್ವದಲ್ಲಿ ಬಂಟಕಲ್ಲು ಮತ್ತು ಹೇರೂರು ಪರಿಸರದಲ್ಲಿ ನಾಯಿಗಳಿಗೆ ರೇಬಿಸ್‌ ಲಸಿಕೆ ಕೊಡಿಸಲಾಗಿದೆ. ಆದರೂ ಹುಚ್ಚುನಾಯಿ ಹಾವಳಿ ವಿಪರೀತವಾಗಿದೆ.

You cannot copy content from Baravanige News

Scroll to Top