ಫ್ಲಾಟ್‌ನಲ್ಲಿ ಗಗನಸಖಿ ಶವವಾಗಿ ಪತ್ತೆ; ಸ್ವೀಪರ್‌ನ ಬಂಧನ

ಮುಂಬೈ, ಸೆ 04: ತರಬೇತಿ ಪಡೆಯುತ್ತಿದ್ದ ಗಗನಸಖಿಯೊಬ್ಬರು ಉಪನಗರದಲ್ಲಿರುವ ಫ್ಲಾಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತರನ್ನು ರೂಪಲ್ ಓಗ್ರೆ (24)ಎಂದು ಗುರುತಿಸಲಾಗಿದ್ದು, ಛತ್ತೀಸ್‌ಗಢ ಮೂಲದವರಾಗಿದ್ದು, ಏರ್ ಇಂಡಿಯಾದಲ್ಲಿ ತರಬೇತಿಗಾಗಿ ಏಪ್ರಿಲ್‌ನಲ್ಲಿ ಮುಂಬೈಗೆ ಬಂದಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.

ಉಪನಗರ ಅಂಧೇರಿಯ ಮರೋಲ್ ಪ್ರದೇಶದ ಕ್ರಿಶನ್‌ಲಾಲ್ ಮರ್ವಾಹ್ ಮಾರ್ಗದಲ್ಲಿರುವ ಎನ್‌ಜಿ ಕಾಂಪ್ಲೆಕ್ಸ್‌ನಲ್ಲಿರುವ ಫ್ಲಾಟ್‌ನಲ್ಲಿ ಭಾನುವಾರ ತಡರಾತ್ರಿ ಆಕೆ ಶವವಾಗಿ ಪತ್ತೆಯಾಗಿದ್ದಾಳೆ ಎಂದು ಹೇಳಿದರು.

ಕೆಲವು ದಿನಗಳ ಹಿಂದೆ ತವರು ಮನೆಗೆ ಹೋಗಿದ್ದ ತನ್ನ ಸಹೋದರಿ ಮತ್ತು ತನ್ನ ಗೆಳೆಯನೊಂದಿಗೆ ಅಂಧೇರಿಯ ಪ್ಲಶ್ ಹೌಸಿಂಗ್ ಸೊಸೈಟಿಯಲ್ಲಿ ತನ್ನ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. ಗಗನಸಖಿ ಸಾವಿಗೆ ಸಂಬಂಧಿಸಿದಂತೆ ಕಸಗುಡಿಸುವ (ಸ್ವೀಪರ್‌) ಕೆಲಸ ಮಾಡುತ್ತಿದ್ದ 40 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಆತನನ್ನು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಹೌಸಿಂಗ್ ಸೊಸೈಟಿಯಲ್ಲಿನ ಭದ್ರತಾ ಕ್ಯಾಮೆರಾಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.ಆರೋಪಿಗಳ ಪತ್ತೆಗೆ 12 ತಂಡಗಳನ್ನು ರಚಿಸಲಾಗಿದೆ. ಸ್ವೀಪರ್‌ ವಿಕ್ರಮ್ ಅತ್ವಾಲ್ ಪತ್ನಿಯನ್ನೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಗಗನಸಖಿ ರೂಪಾಲ್‌ಗೆ ಆಕೆಯ ಮನೆಯವರು ಫೋನ್‌ ಕರೆ ಮಾಡಿದ್ದರು. ಆದರೆ ಆಕೆ ಕಾಲ್‌ ಸ್ವೀಕರಿಸದ ಹಿನ್ನಲೆ ಅನುಮಾನಗೊಂಡು ಮನೆಯವರು ಮುಂಬೈನಲ್ಲಿದ್ದ ಆಕೆಯ ಸ್ನೇಹಿತರಿಗೆ ಪರೀಕ್ಷಿಸುವಂತೆ ತಿಳಿಸಿದ್ದಾರೆ. ಆಕೆಯ ಸ್ನೇಹಿತರು ಅಲ್ಲಿಗೆ ಹೋಗಿ ನೋಡಿದಾಗ ಫ್ಲಾಟ್ ಒಳಗಿನಿಂದ ಬೀಗ ಹಾಕಿರುವುದು ಕಂಡು ಬಂದಿದೆ. ನಂತರ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಅಧಿಕಾರಿಗಳು ಫ್ಲಾಟ್‌ಗೆ ಬಂದು ನೋಡಿದ್ದಾರೆ. ಗಗನಸಖಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಆಕೆಯನ್ನು ಹತ್ತಿರದ ರಾಜವಾಡಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಸ್ಪಷ್ಟಪಡಿಸಿದರು.

ಪ್ರಾಥಮಿಕ ಮಾಹಿತಿಯ ಆಧಾರದ ಮೇಲೆ ಪೊಲೀಸರು ಕೊಲೆ ಪ್ರಕರಣದ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ. ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

You cannot copy content from Baravanige News

Scroll to Top