ಗಣೇಶ ಹಬ್ಬಕ್ಕೆ ಭರದ ಸಿದ್ದತೆ : ಈ ಬಾರಿ 463 ಪೆಂಡಲ್ಗಳಲ್ಲಿ ರಾರಾಜಿಸಲಿದ್ದಾನೆ ಗಣೇಶ

ಉಡುಪಿ : ಜಿಲ್ಲೆಯಾದ್ಯಂತ ಗಣೇಶ ಹಬ್ಬಕ್ಕೆ ಭರದ ಸಿದ್ದತೆಗಳು ನಡೆಯುತ್ತಿವೆ. ಪ್ರಮುಖ ಗಣೇಶೋತ್ಸವ ಸಮಿತಿಗಳಾದ ಕೊಡವೂರು ಗಣೇಶೋತ್ಸವ ಸಮಿತಿ 55ನೇ ವರ್ಷ, ಕಡಿಯಾಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿ 57ನೇ ವರ್ಷ, ಪರ್ಕಳ ಸಾರ್ವಜನಿಕ ಗಣೇಶೋತ್ಸವ 56ನೇ ವರ್ಷ, ಬಾರ್ಕೂರು ಪಟ್ಟಾಭಿರಾಮ ದೇವಳದ 56ನೇ ವರ್ಷದ ಗಣೇಶೋತ್ಸವವನ್ನು ಆಚರಿಸುತ್ತಿವೆ.



ಉಳಿದಂತೆ ಅಂಬಲಪಾಡಿ ಗಣೇಶೋತ್ಸವ ಸಮಿತಿ, ಮಣಿಪಾಲ ಸಿಂಡಿಕೇಟ್ ಬ್ಯಾಂಕ್ ಗೋಲ್ಡನ್ ಜ್ಯುಬಿಲಿ ಹಾಲ್, ಪಡುಬಿದ್ರಿ, ಅಂಬಾಗಿಲು, ಕಾರ್ಕಳ, ಗೋಳಿಅಂಗಡಿ, ಕುಂದಾಪುರ, ಸೋಮೇಶ್ವರ ಸೇರಿದಂತೆ ಎಲ್ಲೆಡೆ ಗಣೇಶೋತ್ಸವಕ್ಕೆ ತಯಾರಿ ನಡೆಯುತ್ತಿದೆ. ಒಟ್ಟು 463 ಪೆಂಡಲ್ಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಪೊಲೀಸ್ ಇಲಾಖೆ ಅನುಮತಿ ನೀಡಿದೆ.

ಜಿಲ್ಲೆಯಾದ್ಯಂತ ಪಿಒಪಿ ಗಣೇಶನ ಮೂರ್ತಿಗಳಿಗೆ ನಿಷೇಧ ಹೇರಲಾಗಿದ್ದು, ಪರಿಸರ ಸ್ನೇಹಿ ಗಣೇಶ ವಿಗ್ರಹಗಳಿಗೆ ಬೇಡಿಕೆ ಹೆಚ್ಚಾಗಿದೆ. ಮೂರ್ತಿ ರಚನೆ ಕಾರ್ಯ ಪೂರ್ತಿಗೊಂಡಿದ್ದು ಕೆಲವೇ ಗಂಟೆಗಳಲ್ಲಿ ಗಣೇಶ ಮನೆ ಮನ ತುಂಬಲಿದ್ದಾನೆ.


ಚತುರ್ಥಿಗೆ ಅಗತ್ಯವಾಗಿ ಬೇಕಾದ ಕಬ್ಬಿನ ಬೆಲೆ 80 ರೂಗೆ ಏರಿದ್ದರೆ, ಬಾಳೆಹಣ್ಣು ಕೆಜಿ ೧೨೦ ರೂ ಗೆ ಮಾರಾಟವಾಗುತ್ತಿದೆ. ಮಲ್ಲಿಗೆ ಮತ್ತು ಇತರ ಹೂವುಗಳ ಬೆಲೆಯೂ ಏರಿಕೆ ಕಂಡಿದೆ. ಉಡುಪಿ ನಗರಸಭೆಯ ಮುಂಭಾಗದ ಪಾದಚಾರಿ ಮಾರ್ಗ ಸಂಪೂರ್ಣ ಪುಷ್ಪಮಯವಾಗಿದ್ದು, ಹೊರ ಜಿಲ್ಲೆಗಳಿಂದ ಹೂವು ಮಾರಾಟಗಾರರು ವ್ಯಾಪಾರದಲ್ಲಿ ತೊಡಗಿದ್ದಾರೆ.

3 ಕೆಎಸ್ಆರ್ಪಿಗಳು ಮತ್ತು 8 ಡಿಎಆರ್ ಸೇರಿದಂತೆ ಸುಮಾರು 900 ಪೊಲೀಸರನ್ನು ನಿಯೋಜಿಸಲಾಗಿದ್ದು, ಬಿಗಿ ಬಂದೋಬಸ್ತ್ ಮಾಡಲಾಗಿದೆ. ರಾತ್ರಿ 10 ಗಂಟೆಯ ನಂತರ ಧ್ವನಿ ವ್ಯವಸ್ಥೆಗಳಿಗೆ ಅವಕಾಶ ನಿರಾಕರಿಸಲಾಗಿದೆ.

You cannot copy content from Baravanige News

Scroll to Top