ತಿಲಕಧಾರಣೆಗೆ ನಿರಾಕರಣೆ; ಹೊಸ ವಿವಾದದಲ್ಲಿ ಸಿಎಂ ಸಿದ್ದರಾಮಯ್ಯ

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈದರಾಬಾದ್ ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸಭೆ (ಸಿಡಬ್ಲ್ಯುಸಿ) ವೇಳೆ ತಿಲಕಧಾರಣೆಗೆ ನಿರಾಕರಿಸಿದ್ದಾರೆ.

ಇಂಡಿಯಾ ಕೂಟದ ಸದಸ್ಯ ಪಕ್ಷವಾಗಿರುವ ಡಿಎಂಕೆ ಸನಾತನ ಧರ್ಮದ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿರುವ ನಡುವೆಯೇ ಇದು ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದ್ದು, ಸಿದ್ದರಾಮಯ್ಯ ನಡೆಯನ್ನು ಬಿಜೆಪಿ ಪ್ರಶ್ನಿಸಿದೆ.

ಸಿಡಬ್ಲ್ಯುಸಿ ಸಭಾಂಗಣಕ್ಕೆ ಸಿದ್ದರಾಮಯ್ಯ ಆಗಮಿಸಿದಾಗ ಅವರಿಗೆ ಸ್ವಾಗತಕಾರಿಣಿಯು ಗಂಧದ ಬೊಟ್ಟು ಹಚ್ಚಿ ಆರತಿ ಮಾಡಲು ಮುಂದಾದಾಗ, ಸಿದ್ದರಾಮಯ್ಯ ತಿಲಕಕ್ಕೆ ನಿರಾಕರಿಸುತ್ತಾರೆ. ಸ್ವಾಗತಕಾರಿಣಿ ಆಗ ಆರತಿಯನ್ನಷ್ಟೇ ಮಾಡಿದ್ದಾರೆ. ಇದನ್ನು ಪಕ್ಕದಲ್ಲೇ ಇದ್ದ ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್ ಹಾಗೂ ಇತರರು ಮೂಕಪ್ರೇಕ್ಷಕರಂತೆ ನೋಡುತ್ತಾರೆ.

ಇದನ್ನು ಟೀಕಿಸಿರುವ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ, ಮಮತಾ ದೀದಿಯ ನಂತರ ಈಗ ಸಿದ್ದರಾಮಯ್ಯ ತಿಲಕ ಧಾರಣೆಗೆ ನಿರಾಕರಿಸಿದ್ದಾರೆ. ಟೋಪಿ (ಮುಸ್ಲಿಂ ಟೋಪಿ) ಹಾಕುವುದು ಸರಿ. ಆದರೆ ತಿಲಕ ಧಾರಣೆ ಸರಿ ಅಲ್ಲವೆ…? ಏಕೆಂದರೆ ಮುಂಬೈನಲ್ಲಿ ಹಿಂದೂಗಳು ಮತ್ತು ಸನಾತನ ಧರ್ಮದ ಮೇಲೆ ದಾಳಿ ಮಾಡಲು ಇಂಡಿಯಾ ಮೈತ್ರಿಕೂಟ ನಿರ್ಧರಿಸಿದೆ ಎಂದಿದ್ದಾರೆ.

ಉದಯನಿಧಿ ಸ್ಟಾಲಿನ್‌ನಿಂದ ಎ. ರಾಜಾ ಹಾಗೂ ಜಿ. ಪರಮೇಶ್ವರರರಿಂದ ಪ್ರಿಯಾಂಕ್ ಖರ್ಗೆವರೆಗೆ, ಆರ್‌ಜೆಡಿಯಿಂದ ಎಸ್‌ಪಿವರೆಗೆ – ‘ಕರೋ ಹಿಂದೂ ಆಸ್ಥಾ ಪೆ ಚೋಟ್, ಔರ್ ಕೋ ಮತಬ್ಯಾಂಕ್ ಕಾ ವೋಟ್ (ಹಿಂದೂ ನಂಬಿಕೆಗೆ ಘಾಸಿ ಮಾಡುವುದು, ಮತ ಬ್ಯಾಂಕ್‌ಗೆ ಮಣೆ ಹಾಕುವುದು) ತಂತ್ರ ಇದಾಗಿದೆ ಎಂದು ಬಿಜೆಪಿ ಟೀಕಿಸಿದೆ.

Scroll to Top