ಮಲ್ಪೆ, ಸೆ.25: ಮಳೆಗಾಲದಲ್ಲಿ ಪ್ರವಾಸಿಗರ ಸುರಕ್ಷೆಗಾಗಿ ಮಲ್ಪೆ ಬೀಚ್‌ನ ತೀರದುದ್ದಕ್ಕೂ ಅಳವಡಿಸಿದ್ದ ಬಲೆಯನ್ನು ಸೆ. 26ರಂದು ತೆರವುಗೊಳಿಸಲಾಗುವುದು.
ಸಾಮಾನ್ಯವಾಗಿ ಮಳೆಗಾಲದಲ್ಲಿ ಕಡಲ ಆಬ್ಬರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪ್ರತೀ ವರ್ಷ ಮೇ 15ರಿಂದ ಸೆ. 15ರ ವರೆಗೆ ಬೀಚ್‌ನ ಉದ್ದಕ್ಕೂ ಕಡಲತೀರದಲ್ಲಿ ಪ್ರತಿಫಲಿಸುವ ಪಟ್ಟಿ ಮತ್ತು ಮೀನುಗಾರಿಕೆ ಬಲೆಯನ್ನು (ಫಿಶ್ ನೆಟ್) ಕಟ್ಟಿ ಪ್ರವಾಸಿಗರು ನೀರಿಗೆ ಇಳಿಯದಂತೆ ತಡೆಯಲಾಗುತ್ತದೆ.
ಕಡಲ ಪ್ರಕ್ಷುಬ್ಧತೆಯಿಂದಾಗಿ ಈ ಬಾರಿ ಜಿಲ್ಲಾಡಳಿತ ಸೆ. 25ರ ವರೆಗೂ ಪ್ರವೇಶ ನಿರ್ಬಂಧವನ್ನು ವಿಸ್ತರಿಸಿತ್ತು. ಇದೀಗ ವಾತಾವರಣ ಸಹಜ ಸ್ಥಿತಿಗೆ ಬಂದಿರುವ ಕಾರಣ ಸೆ. 26ರಿಂದ ಬಲೆಯನ್ನು ತೆರವುಗೊಳಿಸಿ ಪ್ರವಾಸಿಗರ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತದೆ.
ಬೋಟಿಂಗ್ ಸೇರಿದಂತೆ ಜಲಸಾಹಸ ಕ್ರೀಡೆಗಳು ಈಗಾಗಲೇ ಟೆಂಡರ್ ಪ್ರಕ್ರಿಯೆಯಲ್ಲಿದ್ದು ಅದು ಮುಗಿದ ತತ್‌ಕ್ಷಣ ಆರಂಭಗೊಳ್ಳಲಿವೆ ಎಂದು ಮಲ್ಪೆ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ, ನಗರಸಭೆಯ ಪೌರಾಯುಕ್ತ ರಾಯಪ್ಪ ಅವರು ತಿಳಿಸಿದ್ದಾರೆ.