ಮುಂಬೈ, ಸೆ.28: ಗೂಗಲ್ ಅನ್ನೋ ಮಾಹಿತಿ ತಂತ್ರಜ್ಞಾನ ಯಾವುದೇ ಪ್ರಶ್ನೆ ಕೇಳಿದ್ರೂ ಥಟ್ ಅಂತ ಉತ್ತರ ಕೊಡುತ್ತೆ. ಈಗಂತೂ ಸಣ್ಣ ವಯಸ್ಸಿನ ಮಕ್ಕಳಿಂದ ಹಿಡಿದು ಬಹಳಷ್ಟು ಮಂದಿ ಗೂಗಲ್ ಸರ್ಚ್ ಇಂಜಿನ್ ಪ್ರಯೋಜನ ಪಡೆಯುತ್ತಾರೆ. ಆದರೆ ಇಲ್ಲೊಬ್ಬ ಯುವಕ ಆತ್ಮಹತ್ಯೆ ಮಾಡಿಕೊಳ್ಳುವ ಸುಲಭ ಮಾರ್ಗಗಳನ್ನು ಹುಡುಕಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಈ ಯುವಕ ಗೂಗಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳೋ ವಿಧಾನಗಳನ್ನು ಸರ್ಚ್ ಮಾಡಿದ ಮೇಲೆ ಏನಾಯ್ತು ಅನ್ನೋದೇ ಸಖತ್ ಇಂಟ್ರೆಸ್ಟಿಂಗ್ ಸಂಗತಿ.
ರಾಜಸ್ಥಾನದ 28 ವರ್ಷದ ಯುವಕ ಮುಂಬೈ ಉತ್ತರ ಭಾಗದ ಮಾಲವಾನಿಯದಲ್ಲಿ ನೆಲೆಸಿದ್ದ. ಈತ ಗೂಗಲ್‌ನಲ್ಲಿ ಪದೇ ಪದೇ ಆತ್ಮಹತ್ಯೆ ಮಾಡಿಕೊಳ್ಳುವ ವಿಧಾನಗಳ ಕುರಿತು ಗೂಗಲ್‌ನಲ್ಲಿ ಶೋಧಿಸುತ್ತಿದ್ದ. ಆತ್ಮಹತ್ಯೆ ಮಾಡಿಕೊಳ್ಳುವ ಅತ್ಯುತ್ತಮ ವಿಧಾನಗಳ ಕುರಿತು ಗೂಗಲ್ ಬಳಿ ಮಾಹಿತಿ ಪಡೆದುಕೊಳ್ಳುತ್ತಿದ್ದ. ಈ ಮಾಹಿತಿ ಅಂತಾರಾಷ್ಟ್ರೀಯ ಸೈಬರ್ ಪೊಲೀಸರ ಗಮನಕ್ಕೆ ಬಂದಿದೆ. ಇಂಟರ್‌ಪೋಲ್ ಪೊಲೀಸರು ಈತನ ಮಾಹಿತಿ ಕಲೆ ಹಾಕಿದ್ದು ಕೂಡಲೇ ಮುಂಬೈ ಪೊಲೀಸರಿಗೆ ಸಂದೇಶ ನೀಡಿದ್ದಾರೆ.
ಇಂಟರ್‌ಪೋಲ್ ಸೈಬರ್ ಅಧಿಕಾರಿಗಳು ಸೂಸೈಡ್‌ಗಾಗಿ ಸರ್ಚ್ ಮಾಡುತ್ತಿದ್ದ ಯುವಕನ ಮೊಬೈಲ್ ನಂಬರ್, ಇ-ಮೇಲ್ ಸಹಿತ ಮುಂಬೈ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಮೊಬೈಲ್ ನಂಬರ್ ಆಧಾರದ ಮೇಲೆ ಮುಂಬೈ ಪೊಲೀಸರು ಆತನನ್ನು ಪತ್ತೆ ಮಾಡಿದ್ದು, ವಿಚಾರಣೆ ನಡೆಸಿದ್ದಾರೆ.
ಇಂಟರ್‌ಪೋಲ್ ಸೈಬರ್ ಮಾಹಿತಿಯ ಮೇರೆಗೆ ಮುಂಬೈ ಪೊಲೀಸರು ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಯುವಕನನ್ನು ಪತ್ತೆ ಹಚ್ಚಿದ್ದಾರೆ. ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಅಸಲಿ ವಿಚಾರ ಗೊತ್ತಾಗಿದೆ. ಕಳೆದ 2 ವರ್ಷಗಳ ಹಿಂದೆ ಈ ಯುವಕನ ತಾಯಿ ಅಪರಾಧ ಪ್ರಕರಣದಲ್ಲಿ ಜೈಲು ಸೇರಿದ್ದರು. ತನ್ನ ತಾಯಿಯ ಬಿಡುಗಡೆಗೆ ಪ್ರಯತ್ನಿಸಿದ್ದ ಯುವಕ ಮಾನಸಿಕ ಖಿನ್ನತೆಗೂ ಒಳಗಾಗಿದ್ದ ಎನ್ನಲಾಗಿದೆ. ಇದರ ಜೊತೆಗೆ ಕಳೆದ 6 ತಿಂಗಳಿಂದ ಈತ ನಿರುದ್ಯೋಗಿಯಾಗಿದ್ದ. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುವುದೇ ನನಗೆ ಉಳಿದಿರೋ ಮಾರ್ಗ ಎಂದು ಭಾವಿಸಿದ್ದ.
ಆತ್ಮಹತ್ಯೆಗೆ ಚಿಂತಿಸಿದ್ದ ಯುವಕ ಸದ್ಯ ಮುಂಬೈ ಪೊಲೀಸರ ವಶದಲ್ಲಿದ್ದಾನೆ. ಆತನ ಆರೋಗ್ಯ ಪರೀಕ್ಷೆ ಮಾಡಿರುವ ಪೊಲೀಸರು ಮನಶಾಸ್ತಜ್ಞರಿಂದ ಸೂಕ್ತ ಸಮಾಲೋಚನೆ ಕೊಡಿಸಲು ಮುಂದಾಗಿದ್ದಾರೆ. ಇಂಟರ್‌ಪೋಲ್ ಹಾಗೂ ಮುಂಬೈ ಪೊಲೀಸರ ಕಾರ್ಯಾಚರಣೆಯಿಂದ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ಯುವಕ ಪಾರಾಗಿದ್ದಾನೆ.