ಬೆಂಗಳೂರು ಕಂಬಳ : ಐಶ್ವರ್ಯ ರೈ, ರಜಿನಿಕಾಂತ್ ಆಗಮಿಸುವ ನಿರೀಕ್ಷೆ ; ತಮ್ಮ ಹೆಸರಿನಲ್ಲಿ ಕೋಣ ಓಡಿಸಲು ರಾಜಕಾರಣಿಗಳ ಡಿಮ್ಯಾಂಡ್..!!!

ಮಂಗಳೂರು : ನವೆಂಬರ್ 25 ಮತ್ತು 26 ರಂದು ರಾಜ್ಯ ರಾಜಧಾನಿ ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ನಲ್ಲಿ ಮೊಟ್ಟ ಮೊದಲ ಬಾರಿಗೆ ಕಂಬಳ ಆಯೋಜನೆ ಮಾಡಲಾಗುತ್ತಿದೆ.

ಕಂಬಳಕ್ಕೆ ನಟಿ ಐಶ್ವರ್ಯ ರೈ ಹಾಗೂ ನಟ ರಜಿನಿಕಾಂತ್ ಅವರನ್ನು ಕರೆಸಲು ಸಮಿತಿ ಪ್ರಯತ್ನಿಸುತ್ತಿದೆ. ಸದ್ಯ ನಟಿ ಅನುಷ್ಕಾ ಶೆಟ್ಟಿ ಅವರು ಕಂಬಳಕ್ಕೆ ಬರುವುದು ಪಕ್ಕಾ ಆಗಿದೆ. ಈ ಅದ್ದೂರಿ ಕಾರ್ಯಕ್ರಮಕ್ಕೆ ಬಾಲಿವುಡ್, ಸ್ಯಾಂಡಲ್ ವುಡ್ ಸೇರಿ ಎಲ್ಲಾ ಚಿತ್ರರಂಗದ ಗಣ್ಯರಿಗೆ ಆಹ್ವಾನಿಸಲಾಗಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ, ಶಾಸಕ ಅಶೋಕ್ ರೈ ತಿಳಿಸಿದರು.

ತಮ್ಮ ಹೆಸರಿನಲ್ಲಿ ಕೋಣ ಓಡಿಸುವಂತೆ ರಾಜಕಾರಣಿಗಳ ಡಿಮ್ಯಾಂಡ್..!!

ಇನ್ನು ಮತ್ತೊಂದೆಡೆ ತಮ್ಮ ಹೆಸರಿನಲ್ಲಿ ಒಂದು ಜೊತೆ ಕೋಣ ಓಡಿಸುವಂತೆ ಡಿಕೆ ಶಿವಕುಮಾರ್ ಒತ್ತಾಯಿಸಿದ್ದಾರೆ. ಸಭಾಧ್ಯಕ್ಷ ಯು.ಟಿ.ಖಾದರ್, ಸಚಿವ ಸುಧಾಕರ್ ಸೇರಿ ಹಲವು ಸಚಿವರು ತಮ್ಮ ಹೆಸರಿನಲ್ಲಿ ಕೋಣಗಳನ್ನು ಓಡಿಸುವಂತೆ ಬೇಡಿಕೆ ಇಟ್ಟಿದ್ದಾರೆ. ಆದರೇ ಕೋಣ ಕೊಡಲು ಕೋಣದ ಮಾಲೀಕರು ಒಪ್ಪುತ್ತಿಲ್ಲ. ಪ್ರತಿಷ್ಠೆಗೆ ನಡೆಯುವ ಕಂಬಳದಲ್ಲಿ ತಮ್ಮ ಕೋಣಗಳನ್ನು ಬೇರೆಯವರ ಹೆಸರಿಗೆ ಕೊಡಲು ಕೋಣ ಮಾಲೀಕರು ನಕಾರ ಮಾಡುತ್ತಿದ್ದಾರೆ.

ಕಂಬಳ ಸಮಿತಿ ಸಭೆಯಲ್ಲಿ ಕೋಣ ಕೊಡಲು ನಿರಾಕರಿಸಿದ್ದಾರೆ ಎಂದು ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ, ಶಾಸಕ ಅಶೋಕ್ ರೈ ಅವರು ಹೇಳಿದರು.

ಬೆಂಗಳೂರು ಕಂಬಳದಲ್ಲಿ ಕೋಣಗಳಿಗೆ ಕರಾವಳಿ ನೀರು

ಕಂಬಳ ಪೂರ್ವಭಾವಿ ಸಭೆಯಲ್ಲಿ ಕೋಣಗಳ ಮಾಲೀಕರು ಕೋಣಗಳಿಗೆ ಕುಡಿಯುವ ನೀರಿನಲ್ಲೂ ಡಿಮ್ಯಾಂಡ್ ಮಾಡಿದ್ದಾರೆ. ಹೀಗಾಗಿ ಕೋಣಗಳಿಗೆ ಕುಡಿಯಲು ಮಿನರಲ್ ವಾಟರ್ ಕೊಡಿಸುವುದಾಗಿ ಸಮಿತಿ ಹೇಳಿದೆ. ಆದರೆ ಅದಕ್ಕೊಪ್ಪದ ಮಾಲೀಕರು ಕರಾವಳಿಯ ನೀರನ್ನೇ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ಟ್ಯಾಂಕರ್ಗಳ ಮೂಲಕ ಕರಾವಳಿಯ ನೀರನ್ನು ಬೆಂಗಳೂರಿಗೆ ತರಲು ಚಿಂತನೆ ನಡೆದಿದೆ. ಇದರ ಜೊತೆಗೆ ಪಶು ಆಂಬುಲೆನ್ಸ್, ಪಶು ವೈದ್ಯಾಧಿಕಾರಿಗಳ ಜೊತೆ ಲಾರಿಗಳ ಮೂಲಕ ಕೋಣಗಳನ್ನು ಬೆಂಗಳೂರಿಗೆ‌ ಕರೆಸಿಕೊಳ್ಳಲು ಸಿದ್ಧತೆ ನಡೆದಿದೆ.

ದಕ್ಷಿಣ ಕನ್ನಡ, ಉಡುಪಿ ಮತ್ತು ಕೇರಳದ ಕಾಸರಗೋಡು ಜಿಲ್ಲೆಯ 100 ಜೋಡಿಗೂ ಅಧಿಕ ಕೋಣಗಳು ಬೆಂಗಳೂರಿಗೆ ಆಗಮಿಸಲಿವೆ. ಮಂಗಳೂರಿನಿಂದ ಮೆರವಣಿಗೆ ಮೂಲಕ ಕೋಣಗಳನ್ನು ಬೀಳ್ಕೊಡಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ಹೇಳಿದರು.

Scroll to Top