ಕಗ್ಗತ್ತಲ ಮಳೆಯಲ್ಲಿ ನದಿಯನ್ನು ರಸ್ತೆ ಎಂದು ತೋರಿಸಿದ ಜಿಪಿಎಸ್ : ಕಾರು ಮುಳುಗಿ ಕೇರಳದ ಇಬ್ಬರು ವೈದ್ಯರು ಸಾವು

ತಿರುವನಂತಪುರಂ: ರಾತ್ರಿ ವೇಳೆ ಭಾರೀ ಮಳೆಯ ನಡುವೆ ಜಿಪಿಎಸ್ ಎಡವಟ್ಟಿನಿಂದ ಕಾರೊಂದು ನದಿಯಲ್ಲಿ ಮುಳುಗಿ ಇಬ್ಬರು ವೈದ್ಯರು ಮೃತಪಟ್ಟ ಘಟನೆ ಕೇರಳದ ಎರ್ನಾಕುಲಂನಲ್ಲಿ ನಡೆದಿದೆ.

ಮೃತರನ್ನು ಡಾ.ಅದ್ವೈತ್ (29) ಹಾಗೂ ಡಾ.ಅಜ್ಮಲ್ ಆಸಿಫ್ (29) ಎಂದು ಗುರುತಿಸಲಾಗಿದೆ.

ಘಟನೆಯಲ್ಲಿ ಕಾರಿನಲ್ಲಿದ್ದ ಇತರ ಮೂವರು ಹೊರ ಬಂದು ತಮ್ಮ ಜೀವ ಉಳಿಸಿಕೊಂಡಿದ್ದಾರೆ. ಈ ಘಟನೆ ಭಾನುವಾರ ರಾತ್ರಿ ನಡೆದಿದೆ ಎಂದು ತಿಳಿದು ಬಂದಿದೆ.

ಡಾ.ಅದ್ವೈತ್ ಅವರ ಹುಟ್ಟುಹಬ್ಬದ ಸಲುವಾಗಿ ಶಾಪಿಂಗ್‍ಗೆ ಕೊಚ್ಚಿಗೆ ಹೋಗಿದ್ದರು. ಶಾಪಿಂಗ್ ಮುಗಿಸಿ ಕೊಚ್ಚಿಯಿಂದ ಕೊಡುಂಗಲ್ಲೂರಿಗೆ ಹಿಂತಿರುಗುತ್ತಿದ್ದರು. ಈ ವೇಳೆ ಭಾರೀ ಮಳೆಯಾಗುತ್ತಿತ್ತು. ದಾರಿಯ ಪರಿಚಯ ಇರದ ಕಾರಣ ಜಿಪಿಎಸ್ ನೆರವು ಪಡೆದುಕೊಂಡಿದ್ದಾರೆ. ಈ ವೇಳೆ ನೀರು ತುಂಬಿದ ರಸ್ತೆಯಲ್ಲಿ ಕಾರು ಸಂಚರಿಸಿದೆ. ಈ ವೇಳೆ ದಾರಿಯನ್ನು ನೇರವಾಗಿಯೇ ಜಿಪಿಎಸ್ ಮ್ಯಾಪ್‍ನಲ್ಲಿ ತೋರಿಸಿದೆ. ಇದರಿಂದ ಅದೇ ಮಾರ್ಗದಲ್ಲಿ ಸಂಚರಿಸಿದ್ದಾರೆ. ಈ ವೇಳೆ ಕಾರು ನದಿಯಲ್ಲಿ ಮುಳುಗಿದೆ.

ಬದುಕುಳಿದವರಲ್ಲಿ ಒಬ್ಬರಾದ ಡಾ.ಗಾಜಿಕ್ ತಬ್ಸೀರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಈ ಮಾಹಿತಿ ಹಂಚಿಕೊಂಡಿದ್ದಾರೆ. ಅದರ ಹೊರತಾಗಿಯೂ ನಾನು ಚಾಲನೆ ಮಾಡದ ಕಾರಣ, ಇದು ಅಪ್ಲಿಕೇಶನ್‍ನ ತಾಂತ್ರಿಕ ದೋಷವೋ ಅಥವಾ ಮಾನವ ದೋಷವೋ ಎಂದು ನಾನು ಖಚಿತಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

Scroll to Top