ಉಡುಪಿ, ಅ.09: ಜಿಲ್ಲೆಯ ಕುಂದಾಪುರ ತಾಲೂಕಿನ ಬೆಳ್ವೆ ಮೂಲದ ಚೈತ್ರಾ ಪೂಜಾರಿ ಎಂಬ ಯುವತಿ ಸೇನೆಗೆ ಸೇರಿ ದೇಶ ಸೇವೆ ಮಾಡಬೇಕು ಎಂದು ಕನಸು ಕಂಡಿದ್ದಳು. ಆದರೇ ಆಕೆಯ ಕನಸಿಗೆ ಅಪಘಾತ ಕೊಳ್ಳಿ ಇಟ್ಟಿದೆ.
ಎರಡು ವರ್ಷಗಳ ಹಿಂದೆ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಚೈತ್ರಾಳಿಗೆ ಅಪಘಾತದಿಂದ ಕಾಲಿನ ಮಂಡಿ ಭಾಗದಲ್ಲಿ ಗಂಭೀರವಾಗಿ ಗಾಯವಾಗಿತ್ತು. ಗಾಯ ಸರಿಯಾಗಿ ಗಮನಿಸದೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದು, ಎರಡು ವರ್ಷದಿಂದ ಚೈತ್ರಾಳ ಗಾಯ ವಾಸಿ ಆಗಿಲ್ಲ. ನೋವು ಹೆಚ್ಚಾಗಿದೆ. ಎಳೆಯ ವಯಸ್ಸಿನ ನನಗೆ ನಡೆದಾಡದಂತೆ ಮಾಡಿದ ವೈದ್ಯನಿಗೆ ತಕ್ಕ ಶಿಕ್ಷೆ ಆಗಬೇಕೆಂದು ಚೈತ್ರಾ ಕಣ್ಣೀರು ಹಾಕಿದ್ದಾರೆ.
ಸೇನೆಗೆ ಸೇರಬೇಕೆಂದು, ಕೋಚಿಂಗ್ ಪಡೆಯುತ್ತಿದ್ದ ಚೈತ್ರಾ ಆರ್ಮಿ ಕೋಚಿಂಗ್ ಮುಗಿಸಿ ತನ್ನ ತಮ್ಮನೊಂದಿಗೆ ಬೈಕ್ನಲ್ಲಿ ಮನೆಗೆ ತೆರಳುತ್ತಿದ್ದಳು. ಈ ವೇಳೆ ಕೋಳಿ ಸಾಗಿಸುವ ವಾಹನ ಬೈಕ್ಗೆ ಎದುರಾಗಿ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಚೈತ್ರಾ ಗಂಭೀರವಾಗಿ ಗಾಯಗೊಂಡಿದ್ದಳು.
ಚೈತ್ರಾನನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಖಾಸಗಿ ಆಸ್ಪತ್ರೆಯ ವೈದ್ಯ ಗಾಯ ಸರಿಯಾಗಿ ಗಮನಿಸದೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಶಸ್ತ್ರಚಿಕಿತ್ಸೆ ಮಾಡಿಸಿ ಮನೆಗೆ ಬಂದ ಕೆಲವು ದಿನಗಳ ಬಳಿಕ ಕಾಲು ನೋವು ಹೆಚ್ಚಾಗಿದೆ. ದಿನ ಕಳೆದಂತೆ ವಿಪರೀತ ಎನ್ನುವ ಮಟ್ಟಿಗೆ ನೋವು ಹೆಚ್ಚಿದೆ. ಕಾಲು ನೋವು ಹೆಚ್ಚಾದ ಬಳಿಕ ಚೈತ್ರಾ ಮತ್ತೊಂದು ವೈದ್ಯರ ಬಳಿ ಹೋಗಿದ್ದಾರೆ.
ಚಿಕಿತ್ಸೆಗೆ ಹಣವಿಲ್ಲದೆ ಚೈತ್ರಾ ಕಣ್ಣೀರು
ಕಾಲು ನೋವು ಅಲ್ಲೂ ಕಡಿಮೆ ಆಗದ ಹಿನ್ನಲೆಯಲ್ಲಿ ಮಂಗಳೂರಿನ ಮೂಳೆ ತಜ್ಞರ ಬಳಿ ತೆರಳಿದ್ದಾರೆ. ಆಗ ಎಂಆರ್ಐ ಸ್ಕ್ಯಾನ್ ಮಾಡಿಸಿದ್ದು, ಕಾಲಿನಲ್ಲಿ ಅಪಘಾತವಾದ ವಾಹನದ ಕಬ್ಬಿಣ ತುಂಡು, ಮೂಳೆಯ ಪುಡಿಗಳು ಇರುವುದು ಕಂಡು ಬಂದಿದೆ. ಸದ್ಯ ನಡೆಯಲು ಕುಳಿತುಕೊಳ್ಳಲು ಇನೊಬ್ಬರಿಗೆ ಅವಲಂಬಿಸಿರುವ ಚೈತ್ರಾಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಲಕ್ಷಾಂತರ ರೂ. ಹಣದ ಅವಶ್ಯಕತೆ ಇದೆ. ಹೀಗಾಗಿ ಚೈತ್ರಾ ಹಣವಿಲ್ಲದೆ ಕಣ್ಣೀರು ಹಾಕುತ್ತಿದ್ದು, ನೆರವಿಗಾಗಿ ಅಂಗಲಾಚಿದ್ದಾರೆ. ಕುಂದಾಪುರದ ಆಸ್ಪತ್ರೆಯ ವೈದ್ಯನ ನಿರ್ಲಕ್ಷ್ಯದಿಂದ ಸಮಸ್ಯೆ ಎದುರಿಸುತ್ತಿರುವ ಚೈತ್ರಾ, ನನಗೆ ನ್ಯಾಯ ನೀಡಿ, ಎಳೆಯ ವಯಸ್ಸಿನ ನನಗೆ ನಡೆದಾಡದಂತೆ ಮಾಡಿದ ವೈದ್ಯನಿಗೆ ತಕ್ಕ ಶಿಕ್ಷೆ ಆಗಬೇಕೆಂದು ಮನವಿ ಮಾಡಿದ್ದಾರೆ.