ಅನಾಥ ಮಕ್ಕಳಿಗಾಗಿ ಬಿಗ್ ಬಾಸ್ ಶೋಗೆ ಎಂಟ್ರಿ ನೀಡಿರುವುದಾಗಿ ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್ ಈಶ್ವರ್ ಹೇಳಿಕೊಂಡಿದ್ದಾರೆ. ಈ ಬಿಗ್ ಬಾಸ್ ಶೋನಿಂದ ತಮಗೆ ಬಂದಿರುವ ಹಣವನ್ನು ತಂದೆ ತಾಯಿ ಇಲ್ಲದ ಅನಾಥ ಮಕ್ಕಳಿಗೆ ನೀಡುವುದಾಗಿ ಅವರು ತಿಳಿಸಿದ್ದಾರೆ. ಜೊತೆಗೆ ಅವರ ಆಪ್ತರು ಹೇಳುವಂತೆ ಅತಿಥಿಯಾಗಿ ಅವರು ಬಿಗ್ ಬಾಸ್ ಮನೆಗೆ ಹೋಗದೇ ಸ್ಪರ್ಧಿಯಾಗಿಯೇ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.
ಬಿಗ್ ಬಾಸ್ ಮನೆಗೆ ಹೋದ ತಕ್ಷಣವೇ ಸ್ಫೂರ್ತಿದಾಯಕ ಮಾತುಗಳನ್ನು ಪ್ರದೀಪ್ ಈಶ್ವರ ಶುರು ಮಾಡಿದ್ದಾರೆ. ದೊಡ್ಮನೆಯಲ್ಲಿ ಅವರು ಭಾಷಣವನ್ನು ಆರಂಭಿಸಿದ್ದು, ಬಿಗ್ ಬಾಸ್ ಮನೆಯ ಸದಸ್ಯರನ್ನೂ ಉದಾಹರಣೆಯಾಗಿ ತೆಗೆದುಕೊಂಡು ಮಾತುಗಳನ್ನು ಆರಂಭಿಸಿದ್ದಾರೆ. ಆ ಮಾತುಗಳು ಕೆಲವು ಜನರಿಗೆ ಹಿಡಿಸಿದರೆ, ಇನ್ನೂ ಕೆಲವರಿಗೆ ಅವು ಇಷ್ಟವಾಗುತ್ತಿಲ್ಲ.
ಪ್ರದೀಪ್ ಈಶ್ವರ್ ಅಚ್ಚರಿ ಎನ್ನುವಂತೆ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ಎಲ್ಲ ಸ್ಪರ್ಧಿಗಳನ್ನು ಸುದೀಪ್ ಶನಿವಾರವೇ ದೊಡ್ಮನೆ ಒಳಗೆ ಕಳುಹಿಸಿದ್ದರೆ, ಒಂದು ದಿನ ತಡವಾಗಿ ಪ್ರದೀಪ್ ದೊಡ್ಮನೆ ಪ್ರವೇಶ ಮಾಡಿದ್ದಾರೆ. ಡೊಳ್ಳು ಕುಣಿತ ಮೂಲಕ ಅವರನ್ನು ಬಿಗ್ ಬಾಸ್ ಮನೆಗೆ ಸ್ವಾಗತ ನೀಡಿದ್ದಾರೆ.
ಈ ಸಂದರ್ಭದಲ್ಲಿ ಪ್ರದೀಪ್ ಈಶ್ವರ್ ಕಂಡು ಸ್ಪರ್ಧಿಗಳು ಅಚ್ಚರಿ ವ್ಯಕ್ತ ಪಡಿಸಿದರು. ತುಕಾಲಿ ಸಂತು, ‘ನಾವು ಒಬ್ಬ ಎಂ.ಎಲ್.ಎ ಜೊತೆ ಸ್ಪರ್ಧೆ ಮಾಡಬೇಕು’ ಎಂದು ಮಾತನಾಡಿದರೆ, ಅದಕ್ಕೆ ಪ್ರದೀಪ್, ‘ನಾವು ಸೋಲಬೇಕು ಅಂತಾನೆ ಬೆಂಗಳೂರಿಗೆ ಬಂದವನು’ ಎಂದು ಉತ್ತರಿಸಿದ್ದಾರೆ. ಪ್ರದೀಪ್ ಈಶ್ವರ್ ಮನೆಗೆ ಬಂದಿರುವುದು ಹೊಸ ಕಳೆ ಬಂದಂತಾಗಿದೆ. ಒಬ್ಬ ಜನಪ್ರತಿನಿಧಿ ಎಷ್ಟು ದಿನ ಆ ಮನೆಯಲ್ಲಿ ಉಳಿಯಬಹುದು ಎನ್ನುವುದೇ ಅಚ್ಚರಿ.