MLA ಟಿಕೆಟ್ ಡೀಲ್ ಪ್ರಕರಣ : ಗುರುಪುರ ವಜ್ರದೇಹಿ ಮಠಾಧೀಶರಿಗೆ ಸಿಸಿಬಿ ನೋಟಿಸ್ ಜಾರಿ..!

ಬೆಂಗಳೂರು : 2023ರ ವಿಧಾನಸಭೆ ಚುನಾವಣೆಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ಉದ್ಯಮಿಯೊಬ್ಬರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಗುರುಪುರ ವಜ್ರದೇಹಿ ಸ್ವಾಮೀಜಿಗೆ ವಿಚಾರಣೆಗೆ ಹಾಜರಾಗುವಂತೆ ಬೆಂಗಳೂರು ಸಿಸಿಬಿ ನೋಟಿಸ್ ಜಾರಿ ಮಾಡಿದ್ದಾರೆ.





ಮಂಗಳೂರು ಹೊರವಲಯದ ಗುರುಪುರದಲ್ಲಿರುವ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿಗೆ ಬೆಂಗಳೂರು ಸಿಸಿಬಿ ಪೊಲೀಸರು ನೋಟಿಸ್ ತಲುಪಿಸಿದ್ದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ .

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ವಿಚಾರಣೆಯ ಸಮಯದಲ್ಲಿ ಪ್ರಮುಖ ಆರೋಪಿ ಚೈತ್ರಾ ಕುಂದಾಪುರ, ವಜ್ರದೇಹಿ ಮಠದ ಸ್ವಾಮೀಜಿ ಹೆಸರನ್ನು ಪ್ರಸ್ತಾಪಿಸಿದ್ದರು.

“ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಕುಂದಾಪುರ ನನಗೆ ಕರೆ ಮಾಡಿ, ಉದ್ಯಮಿ ಗೋವಿಂದಬಾಬು ಪೂಜಾರಿ ಅವರು ನಿಮಗೆ ₹1.50 ಕೋಟಿ ನೀಡಿದ್ದಾರಂತೆ, ಆ ಹಣವನ್ನು ವಾಪಸ್ ನೀಡಿ ಎಂದು ಹೇಳಿದ್ದರು.

ಚೈತ್ರಾ ಕುಂದಾಪುರ ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದರು. ನಾನು ಇದನ್ನು ಖಂಡಿಸಿದ್ದೆ. ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ” ಎಂದು ವಜ್ರದೇಹಿ ಸ್ವಾಮೀಜಿ ಹೇಳಿದ್ದರು.

“ಈ ಪ್ರಕರಣದಲ್ಲಿ ಚೈತ್ರಾ ಮತ್ತು ಹಾಲಶ್ರೀ ಅವರ ಹೆಸರಿದೆ ಎಂದು ಅವರೇ ಕರೆ ಮಾಡಿ ತಿಳಿಸಿದ್ದರು. ಹಾಲಶ್ರೀ ಅವರು ಯುವ ಬ್ರಿಗೇಡ್ ಜತೆಗೆ ಗುರುತಿಸಿಕೊಂಡಿದ್ದರು. ಹಾಗಾಗಿ, ಚಕ್ರವರ್ತಿ ಸೂಲಿಬೆಲೆ ಅವರಿಗೆ ಕರೆ ಮಾಡಿದ್ದೆ. ಗಗನ್ ಕಡೂರು ಅವರ ಹೆಸರು ಕೇಳಿ ಬಂದಾಗ ಸಿ ಟಿ ರವಿ ಅವರಿಗೆ ಕರೆ ಮಾಡಿದ್ದೆ” ಎಂದು ತಿಳಿಸಿದ್ದರು.

ವಿಧಾನಸಭೆ ಚುನಾವಣೆಗೆ ಟಿಕೆಟ್ ಕೊಡಿಸುವುದಾಗಿ ಉದ್ಯಮಿಯೊಬ್ಬರಿಗೆ ₹5 ಕೋಟಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಜರಂಗದಳ ಕಾರ್ಯಕರ್ತೆ ಚೈತ್ರಾ ಕುಂದಾಪುರ ಸೇರಿದಂತೆ ಎಂಟು ಜನರನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಉಡುಪಿ ಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ಬಂಧಿಸಿದ್ದರು.



ಚೈತ್ರಾ ಕುಂದಾಪುರ, ರಮೇಶ್, ಧನರಾಜ್, ಶ್ರೀಕಾಂತ್, ಪ್ರಜ್ವಲ್, ಗಗನ್ ಎಂಬುವವರನ್ನು ಉಡುಪಿ ಹಾಗೂ ಚಿಕ್ಕಮಗಳೂರಿನಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದರು.

ಚೆಫ್ ಟಾಕ್ ಸಂಸ್ಥೆ ಮುಖ್ಯಸ್ಥನಾಗಿರುವ ಗೋವಿಂದ ಬಾಬು ಪೂಜಾರಿ ಎಂಬುವವರು ಬೈಂದೂರು ವಿಧಾನಸಭೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಆಗಿದ್ದರು.

ಕಳೆದ 2023 ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ಚೈತ್ರಾ ಕುಂದಾಪುರ ಪೂಜಾರಿ ಅವರಿಗೆ ₹5 ಕೋಟಿ ವಂಚಿಸಿದ್ದರು.

ಟಿಕೆಟ್ ಸಿಗದೆ ವಂಚನೆಗೆ ಒಳಗಾದ ಗೋವಿಂದ ಬಾಬು ಪೂಜಾರಿ ಬೆಂಗಳೂರು ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ಚೈತ್ರಾ ಕುಂದಾಪುರ ವಿರುದ್ಧ ದೂರು ದಾಖಲಿಸಿದ್ದರು.

ಚೈತ್ರಾ ಕುಂದಾಪುರ ಸೇರಿದಂತೆ ಆರು ಮಂದಿಗೆ 14 ದಿನಗಳ ಕಾಲ ಅಂದರೆ, ಸೆ.23 ರವರೆಗೆ ಸಿಸಿಬಿ ಕಸ್ಟಡಿಗೆ ನೀಡಲು ಬೆಂಗಳೂರಿನ ಕೋರ್ಟ್‌ ಆದೇಶಿಸಿತ್ತು.

You cannot copy content from Baravanige News

Scroll to Top