ಭಟ್ಕಳ, ಅ.17: ಲಾರಿ ಹಾಗೂ ಕಾರಿನ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಮಹಿಳೆ ಸಾವನಪ್ಪಿ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಭಟ್ಕಳ ತಾಲೂಕಿನ ಮೂಡ್ ಭಟ್ಕಳ ಬೈಪಾಸ್ ಬ್ರಿಡ್ಜ್ ಸಮೀಪ ಇಂದು ನಡೆದಿದೆ.
ಮೃತರನ್ನು ಉಡುಪಿಯ ಬೇಳೂರು ಗ್ರಾಮದ ರೀಟಾ ಕ್ಸೇವಿಯರ್ ಡಿಸೋಜ ಎಂದು ಗುರುತಿಸಲಾಗಿದೆ. ಕ್ಸೇವಿಯರ್ ರಾಜ್ ಕುಟುಂಬವು ಕಾರಿನಲ್ಲಿ ಉಡುಪಿ ಕಡೆಯಿಂದ ಗೋವಾ ಕಡೆಗೆ ತೆರಳುತ್ತಿತ್ತು. ಇವರ ಕಾರು ಭಟ್ಕಳ ಬೈಪಾಸ್ ಬ್ರಿಡ್ಜ್ ಸಮೀಪ ತಲುಪಿದಾಗ ಮುರ್ಡೇಶ್ವರ ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಲಾರಿ ಮುಖಾಮುಖಿ ಢಿಕ್ಕಿಯಾಗಿದೆ ಎಂದು ಹೇಳಲಾಗಿದೆ.
ಘಟನೆಯಲ್ಲಿ ರೀಟಾರ ಪತಿ ಕ್ಸೇವಿಯರ್ ರಾಜ್ ಡಿಸೋಜ ಮತ್ತು ಪುತ್ರಿ ಇನ್ರಿಕಾ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಸ್ಥಳೀಯರು ರಕ್ಷಿಸಿ ಭಟ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.