ಮಂಗಳೂರು, ಅ.18: ನಗರದ ಲೇಡಿಹಿಲ್ ಬಳಿ ಫುಟ್ ಪಾತ್ ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಐದು ಮಂದಿಗೆ ಕಾರು ಡಿಕ್ಕಿಯಾಗಿ ಓರ್ವ ಯುವತಿ ದಾರುಣವಾಗಿ ಮೃತಪಟ್ಟ ಭೀಕರ ಅಪಘಾತ ಇಂದು (ಅ.18) ಸಂಜೆ ಸಂಭವಿಸಿದೆ.
ರೂಪಶ್ರೀ (23) ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟ ಯುವತಿ.
ಸುರತ್ಕಲ್ ನ ಕಾನ, ಬಾಳದ ಗಂಗಾಧರ್ ಅವರ ಪುತ್ರಿಯಾದ ರೂಪಶ್ರೀ ಕುದ್ರೋಳಿ ದೇವಸ್ಥಾನಕ್ಕೆ ತೆರಳಿ ವಾಪಸಾಗುತ್ತಿದ್ದರೆಂದು ತಿಳಿದುಬಂದಿದೆ.
ಘಟನೆಯಲ್ಲಿ ಸ್ವಾತಿ (26), ಹಿತ್ನವಿ (16), ಕೃತಿಕಾ(16) ಮತ್ತು ಯತಿಕಾ(12) ಎಂಬವರು ರಸ್ತೆಗೆ ಅಪ್ಪಳಿಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
5 ಮಂದಿ ಹುಡುಗಿಯರು ಮಂಗಳೂರು ಕಾರ್ಪೋರೇಷನ್ ಈಜುಕೊಳದ ಬಳಿ ಲೇಡಿಹಿಲ್ ನಿಂದ ಮಣ್ಣಗುಡ್ಡ ಜಂಕ್ಷನ್ ಕಡೆಗೆ ಫುಟ್‌ಪಾತ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಅದೇ ವೇಳೆ ಮಣ್ಣಗುಡ್ಡ ಜಂಕ್ಷನ್‌ನಿಂದ ಲೇಡಿಹಿಲ್ ಕಡೆಗೆ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಅತೀ ವೇಗದಲ್ಲಿ ಬಂದ ಕಾರು ಐವರಿಗೂ ಡಿಕ್ಕಿಯಾಗಿದೆ.
ಕಾರು ಚಾಲಕ ಕಮಲೇಶ್ ಬಲದೇವ್ ಎಂಬಾತ ಘಟನೆ ಬಳಿಕ ಸ್ಥಳದಿಂದ ಪರಾರಿಯಾಗಿದ್ದ,ಬಳಿಕ ಶೋರೂಮ್ ಮುಂದೆ ಅಪಘಾತಕ್ಕೆ ಕಾರಣವಾದ ಕಾರನ್ನು ನಿಲ್ಲಿಸಿ ಮನೆಗೆ ಹೋಗಿ ಟ್ರಾಫಿಕ್ ವೆಸ್ಟ್ ಪೊಲೀಸರಿಗೆ ಶರಣಾಗಿದ್ದಾನೆ.
ಫುಟ್‌ಪಾತ್ ಮೇಲೆ ಕಾರು ಹತ್ತಿಸಿ ಅಪಘಾತಕ್ಕೆ ಕಾರಣವಾಗಿದ್ದಾನೆ. ಬೆಚ್ಚಿ ಬೀಳಿಸುವ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ..