ಹುಲಿವೇಷ ವಿಚಾರವಾಗಿ ಇತ್ತಂಡಗಳ ನಡುವೆ ಗಲಾಟೆ : ತಂಡದಿಂದ ಚೂರಿ ಇರಿತ ಮೂವರಿಗೆ ಗಾಯ, ಆಸ್ಪತ್ರೆಗೆ ದಾಖಲು

ಬಂಟ್ವಾಳ : ಪಾಣೆಮಂಗಳೂರು ಶಾರದೋತ್ಸವ ಮೆರವಣಿಗೆ ಸಂದರ್ಭ ಎರಡು ತಂಡಗಳ ನಡುವೆ ನಡೆದ ಗಲಾಟೆಯ ಮುಂದುವರಿದ ಭಾಗವಾಗಿ ನಿನ್ನೆ ರಾತ್ರಿ ಚೂರಿ ಇರಿತ ನಡೆದಿದೆ.

ನಿನ್ನೆ ಮೆಲ್ಕಾರ್ ಜಂಕ್ಷನ್ ನಲ್ಲಿ ಒಂದು ತಂಡದ ಸದಸ್ಯರು ಬ್ಯಾನರ್ ತೆರವು ಮಾಡುತ್ತಿದ್ದಾಗ ಇನ್ನೊಂದು ತಂಡ ಸ್ಥಳಕ್ಕೆ ಬಂದು ಹಲ್ಲೆ ನಡೆಸಿ, ಚೂರಿಯಿಂದ ಇರಿದು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಘಟನೆಯಿಂದ ಮೂವರು ಗಾಯಗೊಂಡಿದ್ದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಾರದ ವಿಸರ್ಜನೆ ಮೆರವಣಿಗೆಯಲ್ಲಿ ಕೆಲವರ್ಷಗಳ ಹಿಂದೆ ಜೊತೆಯಾಗಿ ಹುಲಿ ವೇಷ ಧರಿಸಿ ಹೆಜ್ಜೆ ಹಾಕುತ್ತಿದ್ದ ಯುವಕರ ತಂಡದಲ್ಲಿ ಯಾವುದೋ ವಿಚಾರಕ್ಕೆ ಮನಸ್ತಾಪವಾಗಿ ಬಳಿಕ ಎರಡು ತಂಡಗಳಾಗಿ ಹುಲಿ ವೇಷವನ್ನು ಹಾಕಲಾಗುತ್ತಿದೆಯಂತೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಶಾರದ ವಿಸರ್ಜನೆ ವೇಳೆ ಮೆರವಣಿಗೆಯಲ್ಲಿ ಈ ಎರಡು ತಂಡಗಳ ನಡುವೆ ಗಲಾಟೆ ನಡೆದಿದ್ದು, ಇದರ ಮುಂದುವರಿದ ಭಾಗವಾಗಿ ಗುರುವಾರ ರಾತ್ರಿ ತಂಡಗಳ ನಡುವೆ ವೈಯಕ್ತಿಕ ಕಲಹ ನಡೆದಿದ್ದು, ಮೂವರ ಮೇಲೆ ಮತ್ತೊಂದು ತಂಡದ ಸದಸ್ಯರು ಚೂರಿಯಿಂದ ಇರಿದಿದ್ದಾರೆ.

ಗಾಯಗೊಂಡ ಮೂವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಒಬ್ಬನಿಗೆ ಗಂಭೀರ ಸ್ವರೂಪದ ಗಾಯವಾಗಿರುವ ಹಿನ್ನೆಲೆ ಮೂವರನ್ನು ಮಂಗಳೂರು ಎ.ಜೆ.ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ನಗರ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

ಇರಿತಕ್ಕೊಳಗಾದವರನ್ನು ಬೋಳಂಗಡಿ ನಿವಾಸಿಗಳಾದ ದೇವದಾಸ್, ಸಂದೀಪ್ ,ಶಂಕರ್ ಎಂದು ಗುರುತಿಸಲಾಗಿದ್ದು, ಬೋಳಂಗಡಿ ನಿವಾಸಿ ಶೋಧನ್, ಕಲ್ಲಡ್ಕ ನಿವಾಸಿ ಯತೀಶ್,ಮೆಲ್ಕಾರ್ ನಿವಾಸಿಗಳಾದ ಚೇತನ್,ಪ್ರಸನ್ನ,ಪ್ರದೀಪ್ ಮತ್ತು ಪ್ರಕಾಶ್ ಅವರ ತಂಡ ಹಲ್ಲೆ ನಡೆಸಿ ಚೂರಿಯಿಂದ ಇರಿದಿದ್ದಾರೆ ಎಂದು ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

You cannot copy content from Baravanige News

Scroll to Top