ಐಎನ್‌ಎಸ್ ಗರುಡ ರನ್‌ವೇಯಲ್ಲಿ ನೌಕಾಪಡೆಯ ಹೆಲಿಕಾಪ್ಟರ್ ಪತನ – ಓರ್ವ ಸಿಬ್ಬಂದಿ ಸಾವು

ಕೊಚ್ಚಿ, ನ. 04: ಕೇರಳದ ಕೊಚ್ಚಿಯಲ್ಲಿ ಭಾರತೀಯ ನೌಕಾಪಡೆಯ ಚೇತಕ್ ಹೆಲಿಕಾಪ್ಟರ್ ಪತನಗೊಂಡು ನೌಕಾಪಡೆಯ ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ. ಕೊಚ್ಚಿಯ ಸೌತ್ ನೇವಲ್ ಕಮಾಂಡ್ ಪ್ರಧಾನ ಕಚೇರಿಯಲ್ಲಿರುವ ಐಎನ್ ಎಸ್ ಗರುಡ ರನ್ ವೇಯಲ್ಲಿ ಈ ದುರ್ಘಟನೆ ನಡೆದಿದೆ.

ಶನಿವಾರ ಮಧ್ಯಾಹ್ನ 2.30ರ ಸುಮಾರಿಗೆ ತರಬೇತಿ ವೇಳೆ ಹೆಲಿಕಾಪ್ಟರ್​​ ಪತನವಾಗಿದ್ದು, ಇದೇ ವೇಳೆ ರನ್‌ವೇಯಲ್ಲಿದ್ದ ನೌಕಾಪಡೆಯ ಅಧಿಕಾರಿ ಹೆಲಿಕಾಪ್ಟರ್​​ನ ರೋಟರ್ ಬ್ಲೇಡ್‌ಗಳಿಗೆ ಸಿಲುಕಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಅಪಘಾತದಲ್ಲಿ ಹೆಲಿಕಾಪ್ಟರ್‌ನ ಪೈಲಟ್ ಸೇರಿದಂತೆ ಇಬ್ಬರಿಗೆ ಗಾಯಗಳಾಗಿವೆ ಎಂದು ಪ್ರಾಥಮಿಕ ವರದಿಗಳು ಹೇಳಿವೆ. ಗಾಯಾಳುಗಳಿಬ್ಬರನ್ನೂ ನೌಕಾಪಡೆಯ ಪ್ರಧಾನ ಕಚೇರಿಯ ಸಂಜೀವನಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದ ನಂತರ ಕೊಚ್ಚಿ ಹಾರ್ಬರ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ.

You cannot copy content from Baravanige News

Scroll to Top