ಹಸುರು ಪಟಾಕಿಯ ದೀಪಾವಳಿ : ರಾಜ್ಯ ಸರಕಾರ ಆದೇಶ

ಉಡುಪಿ : ಈ ಬಾರಿ ದೀಪಾವಳಿಗೆ ಹಸುರು ಪಟಾಕಿಗಳನ್ನು ಬಳಕೆ ಮಾಡುವಂತೆ ರಾಜ್ಯ ಸರಕಾರ ಆದೇಶಿಸಿದ್ದು, ಎಲ್ಲ ಕಡೆಯೂ ಕಟ್ಟುನಿಟ್ಟಿನ ಪಾಲನೆಗೆ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.

ಈ ನಡುವೆ ಮಾರಾಟಗಾರರು ಹಾಗೂ ಗ್ರಾಹಕರಿಗೆ ಸಾಂಪ್ರದಾಯಿಕ ಪಟಾಕಿಗಳು ಹಾಗೂ ಹಸುರು ಪಟಾಕಿಗಳ ಬಗ್ಗೆ ಗೊಂದಲ ಉಂಟಾಗುತ್ತಿದೆ.ಕಡಿಮೆ ಅಪಾಯಕಾರಿ ಮತ್ತು ಹೆಚ್ಚು ಹಾನಿಕಾರಕವಲ್ಲದ ರಾಸಾಯನಿಕಗಳಿಂದ ಇದನ್ನು ತಯಾರಿಸಲಾಗುತ್ತದೆ. ಇದರಲ್ಲಿ ಹಸುರು ಲೋಗೋ ಹಾಗೂ ಕ್ಯುಆರ್‌ ಕೋಡ್‌ ಅಳವಡಿಸಲಾಗಿದೆ. ಸಾಮಾನ್ಯ ಪಟಾಕಿಗಳಲ್ಲಿ ನೈಟ್ರೇಟ್‌ ಮತ್ತು ಬೇರಿಯಂಗಳು ಕಂಡುಬರುತ್ತವೆ. ಹಸುರು ಪಟಾಕಿಗಳು ಸ್ಫೋಟಿಸಿದಾಗ ನೀರಿನ ಆವಿ ಮತ್ತು ಹೊಗೆ ಹೊರ ಹಾಕುವುದನ್ನು ದುರ್ಬಲಗೊಳಿಸುತ್ತದೆ.

ಹಸುರು ಪಟಾಕಿಗಳು ಗಾತ್ರದಲ್ಲಿಯೂ ಸಣ್ಣದಾಗಿದ್ದು, ಮಾಲಿನ್ಯದ ಪ್ರಮಾಣ ಶೇ. 30ರಿಂದ 90 ಪ್ರತಿಶತ ಕಡಿಮೆಯಾಗಿದೆ.

ಸಾಂಪ್ರದಾಯಿಕ ಪಟಾಕಿಗಳಿಗಿಂತ ಹಸುರು ಪಟಾಕಿಗಳು ಕಡಿಮೆ ಗಾತ್ರದಲ್ಲಿರುತ್ತವೆ. ಸಾಂಪ್ರದಾಯಿಕ ಪಟಾಕಿಗಳ ತಯಾರಿಕೆಯಲ್ಲಿ ಉಪಯೋಗಿಸುವ ವಿವಿಧ ರಾಸಾಯನಿಕಗಳ ಪ್ರಮಾಣವು ಹಸುರು ಪಟಾಕಿಗಳಲ್ಲಿ ಶೇ. 30ರಷ್ಟು ಕಡಿಮೆ ಪ್ರಮಾಣದಲ್ಲಿರುತ್ತದೆ. ಪಟಾಕಿ ಸಿಡಿಸುವ ಸಂದರ್ಭದಲ್ಲಿ ಹೊರಸೂಸುವ ರಾಸಾಯನಿಕಯುಕ್ತ ಹೊಗೆ, ಧೂಳು ಕಡಿಮೆ ಮಾಡುವ ಸಂಯೋಜಕವನ್ನು ಹಸುರು ಪಟಾಕಿ ತಯಾರಿಸುವ ಪ್ರಕ್ರಿಯೆಯಲ್ಲಿ ಸೇರಿಸುವುದರಿಂದ ವಾತಾವರಣದಲ್ಲಿ ಪರಿವೇಷ್ಠಕ ವಾಯುವಿನಲ್ಲಿನ ಗಾಳಿಯಲ್ಲಿ ತೇಲಾಡುವ ಧೂಳಿನ ಕಣಗಳು, ಎಸ್‌ಒ2 ಮತ್ತು ಎನ್‌ಒ2 ಅಂಶಗಳ ಪ್ರಮಾಣ ಶೇ. 30ರಷ್ಟು ಕಡಿಮೆಯಾಗಲಿದೆ. ವಾತಾವರಣದಲ್ಲಿ ಮಾಲಿನ್ಯವಾಗುವುದನ್ನು ತಡೆಗಟ್ಟುವ ಸಂಬಂಧ ಸರಕಾರ ಕ್ರಮ ಕೈಗೊಂಡಿದ್ದು, ಪೆಟ್ರೋಲಿಯಂ ಎಕ್ಸ್‌ಪ್ಲೋಸಿವ್‌ ಸೇಫ್ಟಿ ಆರ್ಗನೈಸೇಶನ್‌ ಅವರು ಅನುಮೋದಿಸಿದ ಘಟಕಗಳಲ್ಲಿ ತಯಾರಾದ ಪಟಾಕಿಗಳನ್ನು ಖರೀದಿಸಿ ಮಾರಾಟ ಮಾಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯ ಸರಕಾರದ ಆದೇಶದ ಮೇರೆಗೆ ಈ ಬಾರಿ ಹಸುರು ಪಟಾಕಿಗಳ ಉಪಯೋಗಕ್ಕೆ ಆದ್ಯತೆ ನೀಡಲಾಗಿದೆ. ಇದನ್ನು ಹೊರತು ಇತರ ಪಟಾಕಿ ಬಳಸುವುದು ಕಂಡುಬಂದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು.
-ರಾಜು,
ಜಿಲ್ಲಾ ಪರಿಸರ ಅಧಿಕಾರಿ

Scroll to Top